ಹಿಂಸೆ, ಅಸಹಿಷ್ಣುತೆ ತ್ಯಜಿಸೋಣ ರಾಷ್ಟ್ರಪತಿ ಗಣರಾಜ್ಯೋತ್ಸವ ಭಾಷಣ

ಹೊಸದಿಲ್ಲಿ,ಜ.25: 67ನೆ ಗಣರಾಜ್ಯೋತ್ಸವದ ಮುನ್ನಾ ದಿನವಾದ ಸೋಮವಾರ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಭಯೋತ್ಪಾದನೆಯಲ್ಲಿ ಒಳ್ಳೆಯದು ಅಥವಾ ಕೆಟ್ಟದು ಎಂಬುದಿಲ್ಲ. ಅದೊಂದು ಸಂಪೂರ್ಣ ದುಷ್ಟತನ ಎಂದು ಹೇಳಿದ್ದಾರೆ. ಗುಂಡಿನ ಸುರಿಮಳೆಯ ನಡುವೆ ಶಾಂತಿ ಮಾತುಕತೆ ಸಾಧ್ಯವಿಲ್ಲವೆಂದು ಅವರು ದೃಢವಾಗಿ ಹೇಳಿದ್ದಾರೆ.
ಪಠಾಣ್‌ಕೋಟ್ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ, ಅವರು ಭಯೋತ್ಪಾದನೆ ಪಿಡುಗಿನ ಬಗ್ಗೆ ಪ್ರಸ್ತಾಪಿಸುತ್ತಾ, ಭಯೋತ್ಪಾದನೆಯೆಂಬುದು ಕ್ಯಾನ್ಸರ್ ಆಗಿದ್ದು, ಅದಕ್ಕೆ ಶಸ್ತ್ರಕ್ರಿಯೆಯಾಗುವ ಅಗತ್ಯವಿದೆಯೆಂದರು.
2015ನೆ ಇಸವಿಯು ಭಾರತಕ್ಕೆ ಅತ್ಯಂತ ಸವಾಲಿನದ್ದಾಗಿತ್ತು. ಆದಾಗ್ಯೂ ಭಾರತವು ಈ ಎಲ್ಲ ಸವಾಲುಗಳನ್ನು ಎದುರಿಸಿ, ವಿಶ್ವನಾಯಕನಾಗಿ ಹೊರಹೊಮ್ಮುವಲ್ಲಿ ಸಫಲವಾಗಿದೆಯೆಂದರು. ವಿಜ್ಞಾನ,ತಂತ್ರಜ್ಞಾನ, ಸಂಶೋಧನೆ ಹಾಗೂ ಸ್ಟಾರ್ಟ್‌ಅಪ್‌ಗಳಲ್ಲಿ ಭಾರತವು ತ್ವರಿತವಾಗಿ ಜಾಗತಿಕ ನಾಯಕನಾಗಿ ಹೊರಹೊಮ್ಮತೊಡಗಿದೆಯೆಂದು ಅವರು ಹೇಳಿದ್ದಾರೆ. ಇದೇ ರೀತಿ ಭಾರತವು ಮಂದುವರಿದರೆ ಮುಂದಿನ 20 ವರ್ಷಗಳಲ್ಲಿ ಭಾರತದಲ್ಲಿ ಬಡತನವು ಸಂಪೂರ್ಣವಾಗಿ ನಿವಾರಣೆಯಾಗಲಿದೆಯೆಂದವರು ಆಶಾವಾದ ವ್ಯಕ್ತಪಡಿಸಿದರು.
ಹಿಂಸೆ, ಅಸಹಿಷ್ಣುತೆ ಹಾಗೂ ಅತಾರ್ಕಿಕತೆಯನ್ನು ತ್ಯಜಿಸಬೇಕೆಂದು ಅವರು ದೇಶದ ಜನತೆಗೆ ಕರೆ ನೀಡಿದರು. ಸಹಕಾರ ಹಾಗೂ ಸಹಮತದ ಆಧಾರದಲ್ಲಿ ದೇಶದ ನೀತಿಗಳು ರೂಪುಗೊಳ್ಳಬೇಕಾಗಿದೆಯೆಂದವರು ಒತ್ತಿ ಹೇಳಿದರು.2015ನೆ ಇಸವಿಯು ಸವಾಲುಗಳ ವರ್ಷವಾಗಿದೆ. ಆ ವರ್ಷದಲ್ಲಿ ಜಾಗತಿಕ ಆರ್ಥಿಕತೆಯು ಹಿಂಜರಿತಕ್ಕೊಳಗಾಗಿತ್ತು. ಇಂತಹ ಪರಿಸ್ಥಿತಿಯಲ್ಲೂ ಭಾರತದ ಆರ್ಥಿಕತೆಯು ದೃಢವಾಗಿ ನಿಂತಿದೆಯೆಂದು ಅವರು ಹರ್ಷ ವ್ಯಕ್ತಪಡಿಸಿದರು. ಭಾರತದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯಕರ, ಸಂತಸಯುತ ಹಾಗೂ ಉತ್ಪಾದನಾಶೀಲ ಬದುಕನ್ನು ಸಾಗಿಸುವ ಹಕ್ಕಿದೆಯೆಂದು ರಾಷ್ಟ್ರಪತಿ ಪ್ರತಿಪಾದಿಸಿದರು.
ಪ್ರಜಾಪ್ರಭುತ್ವವು ನಮಗೆ ಕೊಡಮಾಡಿರುವ ದೂರು, ಬೇಡಿಕೆ ಹಾಗೂ ಪ್ರತಿಭಟನೆಯನ್ನು ಮುಂದುವರಿಸುತ್ತಲೇ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಬೇಕಿದೆಯೆಂದರು.ಈ ವರ್ಷ ಭಾರತವು ಶೇ.7.3 ಬೆಳವಣಿಗೆಯನ್ನು ಕಾಣುವ ನಿರೀಕ್ಷೆಯಿದ್ದು, ಜಗತ್ತಿನ ಅತಿ ವೇಗದ ಆರ್ಥಿಕ ಬೆಳವಣಿಗೆಯ ರಾಷ್ಟ್ರವಾಗಲಿದೆಯೆಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.
2015ರಲ್ಲಿ ಭಾರತವು ಬರಗಾಲ, ಪ್ರವಾಹ ಸೇರಿದಂತೆ ಹಲವು ಪ್ರಾಕೃತಿಕ ವಿಕೋಪಗಳನ್ನು ಎದುರಿಸಿತ್ತು. ಅಸಾಮಾನ್ಯವಾದ ವಾತಾವರಣದಿಂದಾಗಿ ಭಾರತದ ಕೃಷಿ ಉತ್ಪಾದನೆಯ ಮೇಲೆ ಪರಿಣಾಮವುಂಟಾಗಿತ್ತು ಎಂದು ರಾಷ್ಟ್ರಪತಿ ತಿಳಿಸಿದರು. ದೇಶದ ವಿವಿಧೆಡೆ ಅದರಲ್ಲೂ ವಿಶೇಷವಾಗಿ ನಗರಪ್ರದೇಶಗಳಲ್ಲಿ ಹವಾಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿದೆಯೆಂದು ಅವರು ಕಳವಳ ವ್ಯಕ್ತಪಡಿಸಿದರು.
ದೇಶದ ಅಖಂಡತೆಯನ್ನು ಕಾಪಾಡಲು ಪ್ರಾಣತ್ಯಾಗ ಮಾಡಿದ ವೀರಯೋಧರಿಗೆ ರಾಷ್ಟ್ರಪತಿ ತನ್ನ ಭಾಷಣದಲ್ಲಿ ನಮನಗಳನ್ನು ಸಲ್ಲಿಸಿದರು.







