ಕೇಬಲ್-ಆಪ್ಟಿಕಲ್ ಫೈಬರ್ ಅಳವಳಡಿಕೆಗೆ ಸಮಗ್ರ ನೀತಿ: ಡಿ.ಕೆ.ಶಿವಕುಮಾರ್
ಬೆಂಗಳೂರು, ಜ.25: ರಾಜ್ಯಾದ್ಯಂತ ಟೆಲಿವಿಷನ್ ಕೇಬಲ್ ಹಾಗೂ ಆಪ್ಟಿಕಲ್ ಫೈಬರ್ ಅಳವಡಿಕೆ ಸಂಬಂಧ ಸಮಗ್ರ ನೀತಿಯನ್ನು ರೂಪಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಬೆಂಗಳೂರು ಕೇಬಲ್ ಆಪರೇಟರ್ಸ್ ಪ್ರತಿನಿಧಿಗಳು, ಬಿಬಿಎಂಪಿ ಹಾಗೂ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಕೇಬಲ್‌ಲೇನ್ ಹಾಗೂ ಆಪ್ಟಿಕಲ್ ಫೈಬರ್ ಅಳವಡಿಕೆ ವ್ಯವಹಾರವನ್ನು ಕಾನೂನಿನ ಚೌಕಟ್ಟಿನಲ್ಲಿ ತರುವ ನಿಟ್ಟಿನಲ್ಲಿ ಮೂರು ತಿಂಗಳೊಳಗೆ ಸರಕಾರಕ್ಕೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಸಮಿತಿಯಲ್ಲಿ ಕೇಬಲ್ ಆಪರೇಟರ್, ಆಪ್ಟಿಕಲ್ ಫೈಬರ್ ಪ್ರತಿನಿಧಿಗಳು, ಹೆಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು, ಮಹಾನಗರ ಪಾಲಿಕೆ, ನಗರ ಸಭೆಯ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಈಗಾಗಲೇ ಅನಧಿಕೃತ ಕೇಬಲ್ ಲೇನ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಬಲ್ ಆಪರೇಟರ್‌ಗಳ ಕುಂದು ಕೊರತೆಗಳನ್ನು ಆಲಿಸಲು ಹಾಗೂ ಎಲ್ಲ ವ್ಯವಹಾರವನ್ನು ಕಾನೂನಿನ ಅಡಿಯಲ್ಲಿ ತರುವ ನಿಟ್ಟಿನಲ್ಲಿ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಆಪ್ಟಿಕಲ್ ಫೈಬರ್ ಅಳವಡಿಕೆ ಜಾಲವನ್ನು ಕಾನೂನು ಮೂಲಕ ನಿಯಂತ್ರಣಕ್ಕೆ ತರುವ ಅಗತ್ಯವಿದೆ. ಆದುದರಿಂದ, ಸಮಗ್ರ ನೀತಿಯನ್ನು ಜಾರಿಗೆ ತರಲು ನಿರ್ಧರಿಸಲಾಗಿದ್ದು, ವರದಿ ಬಂದ ನಂತರ ಸರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
51 ಸಾವಿರ ಕೋಟಿ ರೂ.ಬಂಡವಾಳ ಹೂಡಿಕೆ: ಮುಂಬರುವ ಫೆ.3ರಿಂದ 5ರವರೆಗೆ ನಗರದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಇಂಧನ ಕ್ಷೇತ್ರದಲ್ಲಿ 51,942 ಕೋಟಿ ರೂ.ಬಂಡವಾಳ ಹೂಡಿಕೆ ಮಾಡಲು ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಮುಂದೆ ಬಂದಿವೆ ಎಂದು ಶಿವಕುಮಾರ್ ಹೇಳಿದರು.
ಸಮಾವೇಶದಲ್ಲಿ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಚರ್ಚಾಗೋಷ್ಠಿಯನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಪ್ರಯತ್ನ ಪಡುತ್ತಿದ್ದೇವೆ. ಸೌರಶಕ್ತಿ, ಪವನ ವಿದ್ಯುತ್ ಹಾಗೂ ಜಲವಿದ್ಯುತ್ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಯಾಗಲಿದೆ ಎಂದು ಅವರು ತಿಳಿಸಿದರು.
ವಿದ್ಯುತ್ ಸ್ವಾವಲಂಬಿ ರಾಜ್ಯ
ಕರ್ನಾಟಕವು ಮುಂದಿನ ವರ್ಷ ವಿದ್ಯುತ್ ಸ್ವಾವಲಂಬಿ ರಾಜ್ಯವಾಗಲಿದೆ. ಲೋಡ್‌ಶೆಡ್ಡಿಂಗ್ ರದ್ದು ಮಾಡಲಾಗಿದ್ದು, ಕೇವಲ ನಿರ್ವಹಣೆಯ ಉದ್ದೇಶದಿಂದ ಮಾತ್ರ ಕೆಲವೆಡೆ ವಿದ್ಯುತ್ ಕಡಿತ ಮಾಡಲಾಗುತ್ತದೆ.
ಡಿ.ಕೆ.ಶಿವಕುಮಾರ್, ಇಂಧನ ಸಚಿವ.





