ಮೈಸೂರು: 67ನೆ ಗಣರಾಜ್ಯೋತ್ಸವ ಆಚರಣೆಗೆ ಕ್ಷಣಗಣನೆ
ಮೈಸೂರು, ಜ.25: ಭಾರತದ 67ನೆ ಗಣರಾಜ್ಯೋತ್ಸ ವವನ್ನು ಈ ಬಾರಿ ಹಿಂದೆಂದಿಗಿಂತಲೂ ಅತ್ಯಂತ ಅದ್ದೂರಿ ಯಿಂದ ಆಚರಿಸಲು ಜಿಲ್ಲಾಡಳಿತ ಮುಂದಾಗಿದ್ದು, ನಗರದ ಬನ್ನಿಮಂಟಪದ ಮೈದಾನದ ಸಕಲ ಸಜ್ಜಾಗಿದೆ. ರಾಜ್ಯದ ಕೆಲ ನಗರಗಳಲ್ಲಿ ಶಂಕಿತ ಉಗ್ರರ ಬಂಧನದ ಹಿನ್ನೆಲೆಯಲ್ಲಿ ಮೈಸೂರಿನಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.
ಈ ನಡುವೆ, ದಸರೆಯ ಪಂಜಿನ ಕವಾಯತಿನ ವೇಳೆ ಮಾತ್ರ ಅಶ್ವಾರೋಹಣ ಕ್ರೀಡೆಯನ್ನು ನೋಡುವ ಅವಕಾಶವಿತ್ತು. ಈ ಬಾರಿ ಗಣರಾಜ್ಯೋತ್ಸವಕ್ಕೂ ಅಶ್ವರೋಹಣ ಕ್ರೀಡೆಗಳು ಜರಗಲಿದ್ದು, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಗಣರಾಜ್ಯೋತ್ಸವ ಆಚರಣೆಗೆ ಮೆರುಗು ನೀಡಲಿದೆ. ಜ.26ರ ಬೆಳಗ್ಗೆ 9ಕ್ಕೆ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ವಿಶೇಷವಾಗಿ ದಿಲ್ಲಿಯ ಕೆಂಪು ಕೋಟೆಯ ಮಾದರಿಯನ್ನು ರಚಿಸಲಾಗಿದ್ದು, ಹೆಬ್ಬಾಗಿಲಿನ ಇಕ್ಕೆಲೆಗಳಲ್ಲಿ 8 ಅಡಿ ಉದ್ದ ಮತ್ತು 300 ಅಡಿ ಅಗಲದ ಭಾರತದ ತ್ರಿವರ್ಣ ಧ್ವಜ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಉಗ್ರರ ಬಂಧನ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬನ್ನಿಮಂಪಟದ ಮೈದಾನಕ್ಕೆ ಬಿಗಿಭದ್ರತೆಯನ್ನು ಒದಗಿಸಲಾಗಿದೆ. ಅಲ್ಲದೆ, ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಬಂದ ಹುಸಿ ಬಾಂಬ್ ಕರೆಯ ಹಿನ್ನೆಲೆಯಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಈ ನಡುವೆ, ಗಣರಾಜ್ಯೋತ್ಸವದಲ್ಲಿ ಪ್ಲಾಸ್ಟಿಕ್ ಧ್ವಜವನ್ನು ಬಳಸದಂತೆ ಸರಕಾರ ಆದೇಶಿಸಿದ್ದು, ಯಾರೂ ಮಾರಾಟ ಮಾಡಬಾರದು ಎಂದು ನಗರಪಾಲಿಕೆ ಸೂಚಿಸಿದೆ. ಜಿಲ್ಲಾಡಳಿತ ಮಾತ್ರವಲ್ಲದೆ, ನಗರದ ಎಲ್ಲ ಸರಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯಲಿದೆ.





