ಸ್ತ್ರೀ ಸ್ವಾಭಿಮಾನ್ ಯಾತ್ರೆಗೆ ಚಾಲನೆ

ಕಾಸರಗೋಡು, ಜ.25: ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಯಿಂದ ಸಮಾಜ ಮುಕ್ತಗೊಳ್ಳಬೇಕು. ಯುವ ತಲೆಮಾರು ತಪ್ಪುದಾರಿಗೆ ತೆರಳುತ್ತಿದ್ದು, ಮಹಿಳೆಗೆ ಲಭಿಸಬೇಕಾದ ಗೌರವ ಇಂದು ಲಭಿಸುತ್ತಿಲ್ಲ ಎಂದು ಗೋವಾ ರಾಜ್ಯಪಾಲೆ ಮೃದುಲ ಸಿನ್ಹಾ ಅಭಿಪ್ರಾಯಪಟ್ಟರು. ರವಿವಾರ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪರಿಸರದಲ್ಲಿ ಸ್ತ್ರೀ ಸ್ವಾಭಿಮಾನ್ ಯಾತ್ರೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯ ಸುವರ್ಣ ಜಯಂತಿಯಂಗವಾಗಿ ಮಾತೃ ಸಮಿತಿ ರಾಜ್ಯಾಧ್ಯಕ್ಷೆ ಪ್ರೊ.ವಿ.ಟಿ.ರಮಾ ನೇತೃತ್ವದ ಈ ಯಾತ್ರೆ ಕುಂಬಳೆಯ ಅನಂತಪುರದಿಂದ ಹೊರಟು ತಿರುವನಂತಪುರದ ಅನಂತಪುರಿಯಲ್ಲಿ ಕೊನೆಗೊಳ್ಳಲಿದೆ. ಹೆಣ್ಮಕ್ಕಳಲ್ಲಿ ಕೌಟುಂಬಿಕ ಜ್ಞಾನ ತುಂಬಿಸಬೇಕು. ಗೌರವ, ಪ್ರೀತಿ ಬದಲು ಅನೈತಿಕತೆ ಸಮಾಜದಲ್ಲಿ ತುಂಬಿದೆ. ಮಹಿಳೆಯನ್ನು ಭೋಗದ ವಸ್ತುವಾಗಿ ಕೆಲವರು ಕಾಣುತ್ತಿದ್ದಾರೆ. ಮಹಿಳೆಯನ್ನು ಮೊದಲು ಗೌರವಿಸಬೆಕು ಎಂದು ಹೇಳಿದರು. ಸಮಾರಂಭದಲ್ಲಿ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಕಜಂಪಾಡಿ ಸುಬ್ರಹ್ಮಣ್ಯ ಭಟ್, ಪಿ.ಗೋಪಾಲನ್ ಕುಟ್ಟಿ ಮಾಸ್ಟರ್, ನ್ಯಾಯವಾದಿ ಕೆ.ಬಲರಾಂ,ಎ.ಕೆ.ಬಿ.ನಾಯರ್, ಸ್ವಾಮಿ ಅಯ್ಯಪ್ಪದಾಸ್, ಕೆ.ಎಸ್.ನಾರಾಯಣನ್,ಸಂಧ್ಯಾ ವಿ. ಶೆಟ್ಟಿ, ಶಾಂತಾ ಎಸ್.ಪಿಳ್ಳೆ, ಪ್ರಮೀಳಾ ಸಿ.ನಾಯಕ, ನಿಶಾ ಸುಮನ್, ರಾಜನ್ ಮುಳಿಯಾರು ಮೊದಲಾದವರು ಉಪಸ್ಥಿತರಿದ್ದರು.ಯಾತ್ರೆ ಫೆ.7ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ.





