ಪತ್ರಕರ್ತರು ಒತ್ತಡದ ಮಧ್ಯೆ ಪ್ರಾಮಾಣಿಕರಾಗಿರುವುದೇ ಸಾಧನೆ
ಮಣಿಪಾಲ, ಜ.25: ಉಡುಪಿ ಜಿಲ್ಲೆಯ ಪತ್ರಕರ್ತರ ವೈಶಿಷ್ಟವೇ ಪ್ರಾಮಾಣಿಕತೆ. ಇದು ಬೇರೆ ಯಾವ ಜಿಲ್ಲೆಯ ಪತ್ರಕರ್ತರಲ್ಲಿ ಕಾಣಲು ಸಾಧ್ಯವಿಲ್ಲ. ಒತ್ತಡದ ಕೆಲಸದ ನಡುವೆಯು ಪತ್ರಕರ್ತರು ಪ್ರಾಮಾಣಿಕರಾಗಿರುವುದೇ ದೊಡ್ಡ ಸಾಧನೆ ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಮಣಿಪಾಲದ ಕಂಟ್ರೀ ಇನ್ನ್ ಸೂಟ್ಸ್‌ನ ಹಾಲ್‌ನಲ್ಲಿ ಶನಿವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಉಡುಪಿಯ ನೇತ್ರತಜ್ಞ ಡಾ.ಕೃಷ್ಣಪ್ರಸಾದ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಜಯಕರ ಸುವರ್ಣ ವಹಿಸಿದ್ದರು. ಈ ಸಂದರ್ಭದಲ್ಲಿ ನವವಿವಾಹಿತ ಪತ್ರಕರ್ತ ದೀಪಕ್ ಜೈನ್ ದಂಪತಿಯನ್ನು ಅಭಿನಂದಿಸಲಾಯಿತು. ಅವಘಡಕ್ಕೀಡಾದ ಪತ್ರಕರ್ತ ಪರೀಕ್ಷಿತ್‌ಗೆ ಉಡುಪಿ ಪ್ರೆಸ್‌ಕ್ಲಬ್‌ನಿಂದ ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು.
ಕ್ರೀಡಾಕೂಟದ ಸ್ಪರ್ಧೆಯಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಿಸಲಾಯಿತು. ಉಡುಪಿ ಪ್ರೆಸ್‌ಕ್ಲಬ್‌ನ ಸಂಚಾಲಕ ಚೇತನ್ ಪಡುಬಿದ್ರೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಗಣೇಶ್‌ಪ್ರಸಾದ್ ಪಾಂಡೇಲು ಸ್ವಾಗತಿಸಿದರು. ಬಹುಮಾನ ವಿಜೇತರ ಪಟ್ಟಿಯನ್ನು ಕ್ರೀಡಾ ಕಾರ್ಯದರ್ಶಿ ನಝೀರ್ ಪೊಲ್ಯ ವಾಚಿಸಿದರು. ಕೋಶಾಧಿಕಾರಿ ರಾಜೇಶ್‌ಶೆಟ್ಟಿ ಅಲೆವೂರು ವಂದಿಸಿದರು. ಉಪಾಧ್ಯಕ್ಷ ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು.





