ಇರಾನ್-ಸೌದಿ ಉದ್ವಿಗ್ನತೆ ನಿಲ್ಲಲಿ: ಇರಾನ್ ಉಪ ವಿದೇಶಾಂಗ ವ್ಯವಹಾರಗಳ ಸಚಿವ
ಟೆಹರಾನ್, ಜ. 25: ತಮ್ಮ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಇರಾನ್ ಮತ್ತು ಸೌದಿ ಅರೇಬಿಯಗಳು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಇರಾನ್‌ನ ಉಪ ವಿದೇಶ ಸಚಿವ ಅಬ್ಬಾಸ್ ಅರಕ್ಚಿ ಹೇಳಿದ್ದಾರೆ.
ಇತ್ತೀಚೆಗೆ ಶಿಯಾ ಧಾರ್ಮಿಕ ಮುಖಂಡರೊಬ್ಬರನ್ನು ಸೌದಿ ಅರೇಬಿಯ ಗಲ್ಲಿಗೇರಿಸಿದ ಬಳಿಕ ಎರಡು ದೇಶಗಳ ನಡುವೆ ಉದ್ವಿಗ್ನತೆ ತಲೆದೋರಿತು. ಸೌದಿ ಅರೇಬಿಯದ ಈ ಕೃತ್ಯವನ್ನು ಇರಾನ್‌ನಲ್ಲಿ ಪ್ರತಿಭಟಿಸಿದ ಜನರು ಟೆಹರಾನ್‌ನಲ್ಲಿರುವ ಸೌದಿ ಅರೇಬಿಯ ರಾಯಭಾರ ಕಚೇರಿಯಲ್ಲಿ ದಾಂಧಲೆ ನಡೆಸಿದುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು. ಈ ಹಿನ್ನೆಲೆಯಲ್ಲಿ ಇರಾನ್ ಜೊತೆಗಿನ ರಾಯಭಾರ ಸಂಬಂಧವನ್ನು ಸೌದಿ ಅರೇಬಿಯ ಕಡಿದುಕೊಂಡಿತು.
‘‘ಈ ವಲಯವನ್ನು ಹೆಚ್ಚು ಸ್ಥಿರಗೊಳಿಸಲು ಹಾಗೂ ಸುರಕ್ಷಿತಗೊಳಿಸಲು ನೆರವು ನೀಡುವ ಯಾವುದೇ ಉಪಕ್ರಮವನ್ನು ಪರಿಶೀಲಿಸಲು ನಾವು ಸಿದ್ಧರಿದ್ದೇವೆ. ಈ ಮೂಲಕ, ವಲಯಕ್ಕೆ ದೊಡ್ಡ ಬೆದರಿಕೆಯಾಗಿರುವ ಭಯೋತ್ಪಾದನೆ, ತೀವ್ರವಾದ ಮತ್ತು ಪ್ರತ್ಯೇಕತಾವಾದದ ನೈಜ ಸವಾಲುಗಳ ವಿರುದ್ಧ ನಾವು ಹೋರಾಟ ನಡೆಸಬಹುದಾಗಿದೆ’’ ಎಂದು ಟೆಹರಾನ್‌ನಲ್ಲಿ ನಡೆದ ಸಮ್ಮೇಳನವೊಂದರ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು. ಇಡೀ ಜಗತ್ತಿಗೆ ಬೆದರಿಕೆಯಾಗಿರುವ ‘‘ಭಯೋತ್ಪಾದಕ ಶಕ್ತಿ’’ಗಳ ವಿರುದ್ಧದ ಹೋರಾಟ ಮಹತ್ವದ್ದಾಗಿದೆ ಎಂದರು.





