ಕೃಷಿ ಯಂತ್ರಕ್ಕೆ ಸಿಲುಕಿ ವ್ಯಕ್ತಿ ಸಾವು
ಕೊಳ್ಳೇಗಾಲ, ಜ.25: ಭತ್ತ ಕೊಯ್ಲು ಮಾಡುವ ಯಂತ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ಗುಂಡೇಗಾಲ ಗ್ರಾಮದಲ್ಲಿ ಜರಗಿದೆ.
ತಾಲೂಕಿನ ಗುಡೇಗಾಲ ಗ್ರಾಮದ ಶಿವಸ್ವಾಮಿ (65) ಸಾವನ್ನಪ್ಪಿದ ವ್ಯಕ್ತಿ. ಇವರು ಶನಿವಾರ ರಾತ್ರಿ ಪಕ್ಕದ ಜಮೀನಿನಲ್ಲಿ ಭತ್ತವನ್ನು ಕೊಯ್ಲು ಮಾಡುತ್ತಿದ್ದ ವೇಳೆ ಚಾಲಕನ ಆಜಾಗರೂಕತೆಯಿಂದ ಭತ್ತದ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ತಡ ರಾತ್ರಿಯಾದರೂ ಶಿವಸ್ವಾಮಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದರೂ ಯಾವ ಸುಳಿವೂ ಸಿಕ್ಕಿರಲಿಲ್ಲ. ಇಂದು ಇವರ ಜಮೀನಿನ ಪಕ್ಕದಲ್ಲೇ ಇದ್ದ ಭತ್ತದ ಕೊಯ್ಲು ಮಾಡುವ ಯಂತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ವ್ಯಕ್ತಿಯೊಬ್ಬ ಯಂತ್ರದಲ್ಲಿ ಸಿಲುಕಿರುವುದು ಕಂಡು ಬಂದಿತ್ತು. ಹೊರತೆಗೆದು ನೋಡಿದಾಗ ಮೃತ ದೇಹ ಶಿವಸ್ವಾಮಿಯವರದ್ದಾಗಿತ್ತು.
ಈ ಬಗ್ಗೆ ಸ್ಥಳೀಯ ನಿವಾಸಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬೇಟೆ ನೀಡಿದ ಸರ್ಕಲ್ ಇನ್‌ಸ್ಪೆೆಕ್ಟರ್ ಆಮರ್‌ನಾರಾಯಣ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಸೈ ಮೋಹಿತ್‌ಸಹದೇವ್ ಹಾಗೂ ಸಿಬ್ಬಂದಿ ಸ್ಥಳವನ್ನು ಪರಿಶೀಲಿಸಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.





