ಇಂದಿನಿಂದ ಪರಿಶಿಷ್ಟ ಜನರ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕಾಯ್ದೆ ಜಾರಿ

ಹೊಸದಿಲ್ಲಿ, ಜ.25: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸದಸ್ಯರ ಮೇಲೆ ದೌರ್ಜನ್ಯವೆಸಗುವವರ ವಿರುದ್ಧ ಕಠಿಣ ಕಾನೂನುಕ್ರಮವನ್ನು ಕೈಗೊಳ್ಳುವುದಕ್ಕೆ ಅವಕಾಶ ನೀಡುವ ಮಹತ್ವದ ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ-2015’ ಮಂಗಳವಾರದಿಂದ ಜಾರಿಗೆ ಬರಲಿದೆ. ಪರಿಶಿಷ್ಟ ಸಮುದಾಯದ ಮೇಲೆ ಸಾಮಾಜಿಕ ಅಥವಾ ಆರ್ಥಿಕ ಬಹಿಷ್ಕಾರ ಹೇರುವುದು ಸೇರಿಂತೆ ಅವರ ಘನತೆಗೆ ಧಕ್ಕೆ ಯುಂಟು ಮಾಡುವ ಯಾವುದೇ ಕೃತ್ಯವನ್ನು ಈ ಕಾಯ್ದೆಯಡಿ ಗಂಭೀರ ಅಪರಾಧವೆಂಬುದಾಗಿ ಪರಿಗಣಿಸಲಾಗುವುದು.
ಪರಿಶಿಷ್ಟ ಜಾತಿ ಹಾಗೂ ಪಂಗಡಗಳ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ 2015ರ ಪ್ರಕಾರ, ಬಲವಂತವಾಗಿ ತಲೆಕೂದಲು ಹಾಗೂ ಮೀಸೆ ಬೋಳಿಸುವುದು ಸೇರಿದಂತೆ, ಎಸ್‌ಸಿ/ ಎಸ್‌ಟಿ ಸಮುದಾಯದ ಸದಸ್ಯರ ಘನತೆಗೆ ಹಾನಿಯುಂಟು ಮಾಡುವ ಯಾವುದೇ ಪ್ರಕರಣಗಳನ್ನು ದೌರ್ಜನ್ಯವೆಂಬುದಾಗಿ ಪರಿಗಣಿಸಲಾಗುವುದು.
ಪರಿಶಿಷ್ಟರಿಗೆ ನೀರಾವರಿ ಸೌಲಭ್ಯಗಳನ್ನು ಅಥವಾ ಅರಣ್ಯ ಹಕ್ಕುಗಳನ್ನು ನಿರಾಕರಿಸುವುದು, ಚಪ್ಪಲಿಗಳ ಹಾರ ಹಾಕುವುದು, ಪ್ರಾಣಿಗಳ ಕಳೇಬರಗಳನ್ನು ಹೊರಲು ಅಥವಾ ಅವುಗಳ ವಿಲೇವಾರಿಗೆ ಅವರನ್ನು ಬಳಸಿಕೊಳ್ಳುವುದು, ಮಲಹೊರುವಿಕೆಯ ಕೆಲಸಕ್ಕೆ ಅವರನ್ನು ಬಳಸಿಕೊಳ್ಳುವುದು, ಎಸ್‌ಸಿ/ಎಸ್‌ಟಿ ಮಹಿಳೆಯರನ್ನು ದೇವದಾಸಿ ಪದ್ಧತಿಗೆ ದೂಡುವುದು ಹಾಗೂ ಜಾತಿ ಹೆಸರಿನಲ್ಲಿ ನಿಂದಿಸುವುದು ಕೂಡಾ ಇನ್ನು ಮುಂದೆ ಶಿಕ್ಷಾರ್ಹ ಅಪರಾಧವಾಗಲಿದೆ.
ಪರಿಶಿಷ್ಟ ವರ್ಗದ ಮಹಿಳೆಯ ಉಡುಪುಗಳನ್ನು ಕಿತ್ತುಹಾಕಿ ಆಕೆಯನ್ನು ಅಪಮಾನಿಸುವುದು, ಎಸ್‌ಸಿ/ಎಸ್‌ಟಿ ಸಮುದಾಯದ ಸದಸ್ಯನು ಬಲವಂತವಾಗಿ ಮನೆಯನ್ನು ತೊರೆದುಹೋಗುವಂತೆ ಮಾಡುವುದು, ಅವರ ವಿರುದ್ಧ ಲೈಂಗಿಕ ಸ್ವರೂಪದ ಸನ್ನೆಗಳನ್ನು ಮಾಡುವುದು ಕೂಡಾ ಅಪರಾಧವಾಗಲಿದೆ.
ಮತಚಲಾಯಿಸದಂತೆ ಪರಿಶಿಷ್ಟರನ್ನು ತಡೆಯುವುದು, ನಿರ್ದಿಷ್ಟ ಅಭ್ಯರ್ಥಿಗೆ ಮತಚಲಾಯಿಸುವಂತೆ ಅಥವಾ ಚಲಾಯಿಸದಂತೆ ಒತ್ತಡ ಹೇರುವುದು ಕೂಡಾ ಈ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವೆನಿಸಲಿದೆ.
‘‘ಪ್ರಸ್ತುತ, ಭಾರತೀಯ ದಂಡಸಂಹಿತೆಯಡಿ 10 ವರ್ಷ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಕಾರಣವಾಗುವ ಅಪರಾಧಗಳನ್ನು ಪರಿಶಿಷ್ಟ ವರ್ಗದ ಸದಸ್ಯರ ಮೇಲೆ ಎಸಗಿದಲ್ಲಿ, ಅವುಗಳನ್ನು ಪರಿಶಿಷ್ಟರ ದೌರ್ಜನ್ಯ ತಡೆ ಕಾಯ್ದೆಯ ವ್ಯಾಪ್ತಿಗೆ ತರಲಾಗುತ್ತಿತ್ತು. ಆದರೆ ಕಾಯ್ದೆಗೆ ಮಾಡಲಾದ ನೂತನ ತಿದ್ದುಪಡಿಯಿಂದಾಗಿ, ಹತ್ತು ವರ್ಷಗಳಿಗೂ ಕಡಿಮೆ ಅವಧಿಯ ಶಿಕ್ಷೆಗೆ ಕಾರಣವಾಗುವ ಅಪರಾಧಗಳನ್ನೂ ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆಯಡಿಗೆ ತರಲಾಗುತ್ತದೆ.
ಈ ಕಾಯ್ದೆಯಡಿ, ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಹಾಗೂ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನು ನೇಮಿಸಲಾಗುವುದು. ಈ ವಿಶೇಷ ನ್ಯಾಯಾಲಯಗಳಿಗೆ ಅಪರಾಧ ಪ್ರಕರಣಗಳನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವ ಅಧಿಕಾರ ನೀಡಲಾಗುವುದು.ದೋಷಾರೋಪ ಪಟ್ಟಿ ಸಲ್ಲಿಕೆಯಾದ ಎರಡು ತಿಂಗಳೊಳಗೆ ಪ್ರಕರಣಗಳ ವಿಚಾರಣೆಯನ್ನು ಪೂರ್ತಿಗೊಳಿಸಲು ಶ್ರಮಿಸಲಾಗುತ್ತದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ 2015ರ ಪ್ರಕಾರ ಪರಿಶಿಷ್ಟರಿಗೆ ನೀರಾವರಿ ಸೌಲಭ್ಯಗಳನ್ನು ಅಥವಾ ಅರಣ್ಯ ಹಕ್ಕುಗಳನ್ನು ನಿರಾಕರಿಸುವುದು, ಚಪ್ಪಲಿಗಳ ಹಾರ ಹಾಕುವುದು, ಪ್ರಾಣಿಗಳ ಕಳೇಬರಗಳನ್ನು ಹೊರಲು ಅಥವಾ ಅವುಗಳ ವಿಲೇವಾರಿಗೆ ಅವರನ್ನು ಬಳಸಿಕೊಳ್ಳುವುದು, ಮಲ ಹೊರುವಿಕೆಯ ಕೆಲಸಕ್ಕೆ ಅವರನ್ನು ಬಳಸಿಕೊಳ್ಳುವುದು ಮುಂತಾದವು ಇನ್ನು ಶಿಕ್ಷಾರ್ಹ ಅಪರಾಧವಾಗಲಿದೆ.







