‘ಸನ್ನಡತೆ’: 375 ಮಂದಿ ಕೈದಿಗಳಿಗೆ ಬಿಡುಗಡೆ ಭಾಗ್ಯ

ಬೆಂಗಳೂರು, ಜ. 25: ರಾಜ್ಯದ ವಿವಿಧ ಕಾರಾಗೃಹಗಳಲ್ಲಿನ 13ಮಂದಿ ಮಹಿಳಾ ಕೈದಿಗಳು ಸೇರಿದಂತೆ ಒಟ್ಟು 375 ಮಂದಿ ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ನಾಳೆ (ಜ.26) ನಡೆಯಲಿರುವ ಗಣರಾಜ್ಯೋತ್ಸದ ಅಂಗವಾಗಿ ಬಿಡುಗಡೆ ಮಾಡಲು ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.
ಸೋಮವಾರ ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ ಸಿಎಂ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ನಾಲ್ಕೈದು ವರ್ಷಗಳ ಹಿಂೆಯೇ ಜೀವಾವಧಿ ಶಿಕ್ಷೆ ಪೂರೈಸಿ, ಸನ್ನಡತೆಗೆ ಆಯ್ಕೆಯಾಗಿ ವಿವಿಧ ಕಾರಾಗೃಹಗಳಲ್ಲಿದ್ದ ಕೈದಿಗಳಿಗೆ ಕೊನೆಗೂ ‘ಬಿಡುಗಡೆ ಭಾಗ್ಯ’ ಸಿಕ್ಕಿದಂತಾಗಿದೆ.
ಹದಿನಾಲ್ಕು ವರ್ಷ ಶಿಕ್ಷೆ ಪೂರೈಸಿದ (ಮಾಫಿ ರಹಿತ) ಇಬ್ಬರು ಮಹಿಳಾ ಕೈದಿಗಳು ಸೇರಿದಂತೆ 120ಮಂದಿ ಹಾಗೂ ಶಿಕ್ಷೆ ಪೂರೈಸದೆ ಸನ್ನಡತೆಗೆ ಆಯ್ಕೆಯಾದ (ಮಾಫಿ ಸಹಿತ) 11ಮಂದಿ ಮಹಿಳೆಯರು ಸೇರಿದಂತೆ ಒಟ್ಟು 255ಮಂದಿ ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೊಳಿಸಲಾಗುವುದು ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.
ಬೆಂಗಳೂರು-98, ಮೈಸೂರು-42, ವಿಜಯಪುರ-38, ಬೆಳಗಾವಿ-114, ಬಳ್ಳಾರಿ- 23, ಕಲಬುರಗಿ-50, ಧಾರವಾಡ-10 ಸೇರಿದಂತೆ ಒಟ್ಟು 375 ಮಂದಿ ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಸಂಪುಟ ಒಪ್ಪಿಗೆಯನ್ನು ನೀಡಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರೂ ಈ ಸಂಬಂಧದ ಕಡತಕ್ಕೆ ಸಹಿಯನ್ನು ಹಾಕಿದ್ದಾರೆಂದು ಗೊತ್ತಾಗಿದೆ.
ಸನ್ನಡತೆಯ ಆಧಾರದ ಮೇಲೆ ಕೈದಿಗಳ ಅಕಾಲಿಕ ಬಿಡುಗಡೆ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸೃಷ್ಟಿಯಾಗಿದ್ದ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಇದೀಗ ನಿವಾರಣೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಸನ್ನಡತೆಯ ಆಧಾರದ ಮೇಲೆ ಕೈದಿಗಳ ಬಿಡುಗಡೆ ಕ್ರಮ ಕೈಗೊಳ್ಳಲಾಗಿದೆ.







