ಚೀಟಿ ವ್ಯವಹಾರ ವಂಚನೆ: ಆರೋಪ
ಬೆಂಗಳೂರು, ಜ.25: ಚೀಟಿ ವ್ಯವಹಾರದಲ್ಲಿ 1.5 ಕೋಟಿ ರೂ.ಗಳನ್ನು ವಂಚಿಸಿರುವ ರಾಜರಾಜೇಶ್ವರಿ ನಗರದ ಎಸ್.ಎಂ. ಫೈನಾನ್ಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಂಚನೆಗೆ ಒಳಗಾಗದ ದೇವಾನಂದ್ ಒತ್ತಾಯಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚೀಟಿ ಮುಗಿದು ಮೂರು ವರ್ಷಗಳೇ ಕಳೆದರೂ ಹಣ ಕೊಡದೆ ಎಸ್.ಎಂ. ಫೈನಾನ್ಸ್ 90 ಮಂದಿಗೆ ವಂಚಿಸಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಕಟ್ಟಿದ ಹಣವನ್ನು ಕೇಳಲು ಹೋದವರಿಗೆ ಎಸ್.ಎಂ. ಫೈನಾನ್ಸ್ ನಡೆಸುತ್ತಿದ್ದ ಅನಿಲ್ ಖಾಲಿ ಚೆಕ್‌ಗಳನ್ನು ನೀಡಿ ವಂಚಿಸಿದ್ದ. ಈ ಕುರಿತು ಕೋರ್ಟಿಗೆ ಮೊರೆ ಹೋದಾಗ ಹಣ ಹಿಂದಿರುಗಿಸುವಂತೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಅನಿಲ್ ಸದ್ಯ ಪರಾರಿಯಾಗಿದ್ದಾನೆ ಎಂದು ದೂರಿದರು.
ಇದರಿಂದ ಚೀಟಿ ಕಟ್ಟಿದವರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೂಡಲೇ ಅನಿಲ್‌ರನ್ನು ಪತ್ತೆ ಹಚ್ಚಿ ಕಟ್ಟಿದ ಹಣವನ್ನು ಹಿಂದಿರುಗಿಸುವಂತೆ ಸರಕಾರಕ್ಕೆ ಒತ್ತಾಯಿಸಿದರು. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ, ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.







