ಶಾಸಕ ಅಂಗಾರರಿಗೆ ದಲಿತರ ಬಗ್ಗೆ ಕಾಳಜಿಯಿಲ್ಲ: ಆರೋಪ
ಸುಬ್ರಹ್ಮಣ್ಯ, ಜ.25: ದಲಿತ ಸಮುದಾಯದ ಕುರಿತು ಇಲ್ಲಿ ತನಕ ಕಿಂಚಿತ್ ಕಾಳಜಿ ವಹಿಸದ ಶಾಸಕ ಎಸ್.ಅಂಗಾರ ಏಕಾಏಕಿ ದಲಿತ ನಾಯಕನಾಗಿದ್ದು ಹೇಗೆ ಎಂದು ಸುಳ್ಯ ತಾಲೂಕು ಮಹಿಳಾ ದಲಿತ ಘಟಕದ ಅಧ್ಯಕ್ಷೆ ಲಕ್ಷ್ಮೀ ಸುಬ್ರಹ್ಮಣ್ಯ ಪ್ರಶ್ನಿಸಿದ್ದಾರೆ.
ಸುಬ್ರಹ್ಮಣ್ಯದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ಸುಬ್ರಹ್ಮಣ್ಯ ಕಿರುಷಷ್ಠಿ ಸಭಾ ಕಾರ್ಯಕ್ರಮದಲ್ಲಿ ಶಾಸಕ ಎಸ್.ಅಂಗಾರರಿಗೆ ಸಭಾಧ್ಯಕ್ಷತೆ ನೀಡದಿರುವ ಕುರಿತು ಅನಗತ್ಯವಾಗಿ ಪ್ರಚಾರಪಡಿಸಲಾಗುತ್ತಿದೆ. ಸುಳ್ಯ ಕ್ಷೇತ್ರವನ್ನು ಕಳೆದ ಆರು ಅವಧಿಯಲ್ಲಿ ನಿರಂತರ ಪ್ರತಿನಿಧಿಸುತ್ತಿರುವ ಶಾಸಕರು ಇಲ್ಲಿ ತನಕ ದಲಿತ ಸಮುದಾಯದ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸಿಲ್ಲ. ಸಮುದಾಯದ ಹಲವು ಕುಟುಂಬಗಳು ಇಂದಿಗೂ ಮೂಲಸೌಕರ್ಯದಿಂದ ವಂಚಿತಗೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೂ ಅವರ ಕಷ್ಟಕ್ಕೆ ಸ್ಪಂದಿಸದೆ ಇದೀಗ ದಲಿತ ನಾಯಕ ಎಂದು ಹೇಳಿಕೊಳ್ಳುತ್ತಿರುವುದು ರಾಜಕೀಯ ಕುತಂತ್ರ ಎಂದು ಅವರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ತಾಲೂಕು ದಲಿತ ಮಹಿಳಾ ಘಟಕ ಕಾರ್ಯದರ್ಶಿ ಹೇಮಾವತಿ, ಸಮುದಾಯದ ಗಂಗಾಧರ ಕಡಬ ನಾಡೋಳಿ ಉಪಸ್ಥಿತರಿದ್ದರು.





