ಮಂಗಳೂರು ಮಾರುಕಟ್ಟೆಯಲ್ಲಿ ಬಾಂಬ್: ಹುಸಿ ಕರೆ ಪೊಲೀಸ್ ಶ್ವಾನದಳದಿಂದ ತಪಾಸಣೆ

ಮಂಗಳೂರು, ಜ. 26: ನಗರದ ಮಾರುಕಟ್ಟೆಯಲ್ಲಿ ಬಾಂಬ್ ಇದೆ ಎಂಬುದಾಗಿ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದ ಫೋನ್ ಕರೆಯ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ನಗರದ ಪೊಲೀಸರು, ಪೊಲೀಸ್ ಶ್ವಾನದಳದೊಂದಿಗೆ ನಗರದ ಮಾರುಟ್ಟೆಗಳಲ್ಲಿ ತಪಾಸಣೆ ನಡೆಸಿದರು.
ಬೆದರಿಕೆ ಕರೆಯನ್ನು ಅನುಸರಿಸಿ ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ ಮಾರ್ಗದರ್ಶನದಲ್ಲಿ ನಗರದ ಬಾಂಬ್ ಸ್ಕ್ವಾಡ್‌ನ ಪ್ರಭಾರ ಸಬ್ ಇನ್ಸ್‌ಪೆಕ್ಟರ್ ಸೋಮಪ್ಪ ನಾಯಕ್ ನೇತೃತ್ವದಲ್ಲಿ ನಗರದ ಕೇಂದ್ರ ಮಾರುಕಟ್ಟೆ ಹಾಗೂ ಕಂಕನಾಡಿ ಮಾರುಕಟ್ಟೆಯಲ್ಲಿ ಪೊಲೀಸರು ಶ್ವಾನದಳದೊಂದಿಗೆ ತಪಾಸಣೆ ನಡೆಸಿದರು. ತಪಾಸಣೆಯ ವೇಳೆ ಏನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಬಾಂಬ್ ಬೆದರಿಕೆ ಕರೆ ಹುಸಿ ಎನ್ನಲಾಗಿದೆ. ಹಾಗಿದ್ದರೂ, ಕರೆಯೊಂದರ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾಗಿ ತಪಾಸಣೆ ನಡೆಸುವ ಮೂಲಕ ಪೊಲೀಸರು ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ.
ಪೊಲೀಸ್ ಕಂಟ್ರೋಲ್ ರೂಂಗೆ ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ವ್ಯಕ್ತಿಯೊಬ್ಬರು ಕರೆ ಮಾಡಿ ಮಾರುಕಟ್ಟೆಯಲ್ಲಿ ಬಾಂಬ್ ಇದೆ ಎಂದು ಹೇಳಿ ಫೋನ್ ಕಡಿತಗೊಳಿಸಿದ್ದರು. ಈ ನಡುವೆ ಬಾಂಬ್ ನಿಷ್ಕ್ರಿಯ ದಳವನ್ನೂ ಸಿದ್ಧಪಡಿಸಲಾಗಿತ್ತು. ಈ ನಡುವೆ ನಗರದ ಎಲ್ಲಾ ಸಾರ್ವಜನಿಕ ಪ್ರದೇಶ, ಮಾಲ್‌ಗಳಲ್ಲಿ ಪೊಲೀಸರು ತಪಾಸಣೆ ನಡೆಸಲಿದ್ದಾರೆ ಎಂದು ಸೋಮಪ್ಪ ನಾಯಕ್ ತಿಳಿಸಿದ್ದಾರೆ.













