ಜೀವಕ್ಕೆ ಬೆಲೆಯಿಡದ ಕಾನೂನು : 31 ನಿರಾಶ್ರಿತರು ಮುಳುಗಿ ಸಾಯುವುದನ್ನು ನೋಡಿ ನಿಂತ ರಕ್ಷಣಾ ಸಿಬ್ಬಂದಿ

ಗ್ರೀಸ್ ಹಾಗು ಟರ್ಕಿ ನಡುವಿನ ಏಜಿಯನ್ ಸಮುದ್ರದಲ್ಲಿ 31 ನಿರಾಶ್ರಿತರಿದ್ದ ಪುಟ್ಟ ಹಡಗು ಮುಳುಗುವುದನ್ನು ತಾವು ಮೂಕ ಪ್ರೇಕ್ಷಕರಾಗಿ ನೋಡಬೇಕಾಯಿತು ಎಂದು ಎಂದು ಆಸ್ಟ್ರೇಲಿಯದ ನಾಗರಿಕ ಸೈಮನ್ ಲೂಯಿಸ್ ಹೇಳಿದ್ದಾರೆ. ನಿರಾಶ್ರಿತರು ಗಡಿ ದಾಟಲು ಸಹಕರಿಸಿದರೆ ಅಂತಾರಾಷ್ಟ್ರೀಯ ಗಡಿ ಕಾನೂನುಗಳ ಪ್ರಕಾರ ಅವರು ಅಕ್ರಮ ಮಾನವ ಸಾಗಣೆ ಆರೋಪ ಎದುರಿಸಬೇಕಾಗುತ್ತದೆ ಎಂಬುದೇ ಈ ದುರಂತಕ್ಕೆ ಕಾರಣವಾಗಿದೆ.
ಸೈಮನ್ ಹಾಗು ಅವರ ರಕ್ಷಣಾ ತಂಡ ಗ್ರೀಕ್ ದ್ವೀಪ ಲೆಸ್ಬೋಸ್ ಸಮೀಪದಲ್ಲಿ ಇದ್ದಾಗ ನಿರಾಶ್ರಿತರ ಬೋಟ್ ಒಂದು ಸಂಕಷ್ಟದಲ್ಲಿರುವುದು ಕಂಡು ಬಂತು. ಪರಿಶೀಲಿಸಿ ನೋಡುವಾಗ ಆ ಬೋಟ್ ಟರ್ಕಿ ಸಮುದ್ರ ಗಡಿಯೊಳಗೆ ಇತ್ತು . ಇದರಿಂದಾಗಿ ಅದರಿಂದ 5 ಮೀಟರ್ ಅಂತರ ಕಾಯ್ದುಕೊಂಡೇ ಇರಬೇಕಾದ ಸಂಧಿಗ್ದ ಪರಿಸ್ಥಿತಿ ಉಂಟಾಯಿತು. ಹಾಗಾಗಿ ಅದರಲ್ಲಿದ್ದ ಪುರುಷರು, ಮಹಿಳೆಯರು ಹಾಗು ಮಕ್ಕಳು ಮುಳುಗುವುದನ್ನೂ ನೋಡಿಯೂ ಏನೂ ಮಾಡಲಾಗಲಿಲ್ಲ ಎಂದು ಸೈಮನ್ ದುಖ: ತೋಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಆ ಬೋಟ್ ನಲ್ಲಿದ್ದ ಮಹಿಳೆ ತನ್ನ ಮಗುವನ್ನು ಗಡಿಯಿಂದ ಈಚೆ ಹಾಕಿ ನಮಗೆ ತಲುಪಿಸಲು ವಿಫ಼ಲ ಯತ್ನ ನಡೆಸಿದ್ದ ಕರುಣಾಜನಕ ಕತೆಯನ್ನೂ ಸೈಮನ್ ಹೇಳಿದ್ದಾರೆ . ಆಕೆಯ ಮುಖ: ನನ್ನೆದುರು ಬಂದಾಗ ನನಗೆ ದುಖ: ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
" ರಕ್ಷಣಾ ಕೆಲಸ ಅಂದರೆ ಹೀಗೇನೆ. ನಾವು ನಮ್ಮ ಜೀವ ಒತ್ತೆ ಇಟ್ಟು ಹೋಗಿದ್ದರೂ ಕೆಲವೊಮ್ಮೆ ಅಂತಾರಾಷ್ಟ್ರೀಯ ಗಡಿ ಕಾನೂನುಗಳ ಎದುರು ಅಸಹಾಯಕರಾಗಿ ಬಿಡುತ್ತೇವೆ ಎಂದು ಅವರು ಹೇಳಿದ್ದಾರೆ.





