ಸುಳ್ಯದಲ್ಲಿ 67ನೇ ಗಣರಾಜ್ಯೋತ್ಸವ - ಆಡಳಿತದಲ್ಲಿ ಸ್ಪಷ್ಟ ನೀತಿಗೆ ಶಾಸಕ ಅಂಗಾರ ಆಗ್ರಹ

ಸುಳ್ಯ: ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿ ಆಶ್ರಯದಲ್ಲಿ 67ನೇ ಗಣರಾಜ್ಯೋತ್ಸವವನ್ನು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಚರಿಸಲಾಯಿತು.
ತಹಶೀಲ್ದಾರ್ ಅನಂತಶಂಕರ ಅವರು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಅಂಗಾರ, ಆಡಳಿತದಲ್ಲಿ ಸ್ಪಷ್ಟ ನೀತಿ ಇಲ್ಲದಿರುವುದೇ ನಮ್ಮೆಲ್ಲಾ ಅವ್ಯವಸ್ಥೆಗಳಿಗೆ ಮೂಲ ಕಾರಣ. ಓಲೈಕೆಗೆ ಮಹತ್ವ ನೀಡಿದರಿಂದ ಅನೇಕ ವಿಚಾರಗಳಲ್ಲಿ ದೇಶ ತಲೆ ತಗ್ಗಿಸುವಂತಾಗಿದೆ. ಸ್ಪಷ್ಟ ಆಡಳಿತ ವ್ಯವಸ್ಥೆ ಮತ್ತು ನಮ್ಮ ಮಣ್ಣಿನ ಗುಣದಿಂದ ಭಾರತ ಜಗತ್ತಿನಲ್ಲಿಯೇ ತಲೆ ಎತ್ತಿ ನಿಲ್ಲುವಂತಹ ದಿನಗಳು ಬರತೊಡಗಿವೆ ಎಂದರು. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ಶ್ರೀಮತಿ ದಿವ್ಯಪ್ರಭಾ ಚಿಲ್ತಡ್ಕ ಮಾತನಾಡಿ, ದೇಶ ಭಯೋತ್ಪಾದನಾ ಚಟುವಟಿಕೆಗಳಿಂದ ನಡುಗುತ್ತಿರುವುದು ಆತಂಕದ ವಿಚಾರ. ಕ್ಯಾನ್ಸರ್‌ನಂತೆ ಹಬ್ಬುತ್ತಿರುವ ಭಯೋತ್ಪಾದನೆಯನ್ನು ಕಿತ್ತೊಗೆಯಲು ಯುವಜನತೆ ಚಿಂತನೆ ಮಾಡಬೇಕು ಎಂದರು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ , ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ ಕೆ.ವಿ.ಚಿದಾನಂದ, ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಮಾತನಾಡಿದರು.
ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಆರ್.ಮಧುಕುಮಾರ್ ಸ್ವಾಗತಿಸಿದರು. ಶಿಕ್ಷಕ ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಕೆಂಪಲಿಂಗಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಎಂ.ಮೀನಾಕ್ಷಿ ಗೌಡ, ಜೂನಿಯರ್ ಕಾಲೇಜು ಪ್ರಾಂಶುಪಾಲ ಚಿದಾನಂದ ಎಂ.ಎಸ್., ನ.ಪಂ. ಉಪಾಧ್ಯಕ್ಷೆ ಶ್ರೀಮತಿ ಮೀನಾಕ್ಷಿ, ಸದಸ್ಯರಾದ ಕೆ.ಎಂ.ಮುಸ್ತಫ, ಗಿರೀಶ್ ಕಲ್ಲಗದ್ದೆ, ಶ್ರೀಲತಾ ಪ್ರಸನ್ನ, ಸುನೀತಾ ಮೊಂತೆರೋ ಮೊದಲಾದವರು ವೇದಿಕೆಯಲ್ಲಿದ್ದರು.
ಸನ್ಮಾನ:
ಕಳೆದ ಬಾರಿಯ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಎಸ್.ಸತೀಶ್ ಅವರನ್ನು ಸಮಾರಂಭದಲ್ಲಿಸನ್ಮಾನಿಸಲಾಯಿತು. ಈ ಪ್ರಶಸ್ತಿಯ ಹಿಂದೆ ಶ್ರಮ ಹಾಗೂ ಅನೇಕರ ಪ್ರೋತ್ಸಾಹ ಇದೆ ಎಂದು ಸತೀಶ್ ನೆನಪಿಸಿಕೊಂಡರು. ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಕಬಡ್ಡಿ ತಂಡದಲ್ಲಿದ್ದ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಚೈತ್ರ, ಸಾನಿಧ್ಯ ಸುಳ್ಳಿ ಹಾಗೂ ರಶ್ಮಿಯವರನ್ನು ಕೂಡಾ ಸನ್ಮಾನಿಸಲಾಯಿತು. ಸಭಾಕಾರ್ಯಕ್ರಮಕ್ಕೂ ಮೊದಲು ಆಕರ್ಷಕ ಪಥಸಂಚಲನ ನಡೆದು ತಹಶೀಲ್ದಾರ್ ಗೌರವ ವಂದನೆ ಸ್ವೀಕರಿಸಿದರು. ಸುಳ್ಯ ಎಸ್.ಐ.ಚಂದ್ರಶೇಖರ್ ಪಥಸಂಚಲನದ ನೇತೃತ್ವ ವಹಿಸಿದ್ದರು. ಗೃಹರಕ್ಷಕ ದಳ ಮುಖ್ಯಸ್ಥರಾದ ಜಯಂತ ಶೆಟ್ಟಿ ಇದರ ಕಾರ್ಯಕ್ರಮ ನಿರೂಪಿಸಿದರು.







