ಸುಳ್ಯ : ಆಯುರ್ವೇದ ಚಿಕಿತ್ಸಾ ಪದ್ದತಿಗಳ ಮಹತ್ವ ಜಗತ್ತಿಗೆ ತಿಳಿಯಲಿ: ಡಾ.ಸತ್ಯಮೂರ್ತಿ
ಆಯುರ್ವೇದ ಚಿಕಿತ್ಸಾ ಪದ್ದತಿಗಳ ಮಹತ್ವ ಜಗತ್ತಿಗೆ ತಿಳಿಯಲಿ: ಡಾ.ಸತ್ಯಮೂರ್ತಿ
ಸುಳ್ಯ: ಆಯುರ್ವೇದ ಚಿಕಿತ್ಸಾ ಪದ್ದತಿಗಳ ಮಹತ್ವ ಜಗತ್ತಿಗೆ ತಿಳಿಯಬೇಕು. ಅದು ಜಗತ್ತಿನಾದ್ಯಂತ ಪಸರಿಸಬೇಕು ಎಂದು ಕರ್ನಾಟಕ ಆಯುರ್ವೇದ, ಯುನಾನಿ ವೈದ್ಯ ಮಂಡಳಿ ಅಧ್ಯಕ್ಷ ಡಾ.ಸತ್ಯಮೂರ್ತಿ ಭಟ್ ಹೇಳಿದ್ದಾರೆ.
ಅವರು ಭಾರತೀಯ ವೈದ್ಯ ಪದ್ಧತಿಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಆಯುರ್ ಜ್ಯೋತಿ ರಥಯಾತ್ರೆಗೆ ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ನೀಡಿದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮಲ್ಲಿರುವ ಆತ್ಮ ವಿಶ್ವಾಸದ ಕೊರತೆ ಮತ್ತು ಅಜ್ಞಾನದಿಂದ ಆಯುರ್ವೇದವನ್ನು ನಾವು ಸರಿಯಾಗಿ ಉಪಯೋಗಿಸಿಲ್ಲ. ಆಯುರ್ವೇದದ ಮಹತ್ವ ಜಗತ್ತಿಗೆ ತಿಳಿಯಬೇಕು ಮತ್ತು ಆಯುರ್ವೇದದ ಹಿರಿಮೆ ಪುನಃ ಪ್ರತಿಷ್ಠೆಯಾಗಬೇಕು ಎಂಬ ವಿಶ್ವದ ಗಮನ ಸೆಳೆಯಲು ಫೆ.26 ರಿಂದ 28 ರವರೆಗೆ ಬೆಂಗಳೂರಿನಲ್ಲಿ ಗ್ಲೋಬಲ್ ವೆಲ್‌ನೆಸ್ ಮೀಟ್‌ನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಸಮಾರಂಭ ಉದ್ಘಾಟಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ರಾಜೀವ್ ಗಾಂಧಿ ಆರೋಗ್ಯ ವಿವಿಯ ಸಿಂಡಿಕೇಟ್ ಸದಸ್ಯ ಡಾ.ಬಿ.ರಘು, ಸುಳ್ಯ ಎಸ್.ಐ.ಚಂದ್ರಶೇಖರ್, ನಗರ ಪಂಚಾಯಿತಿ ಸದಸ್ಯ ಗಿರೀಶ್ ಕಲ್ಲುಗದ್ದೆ, ಭಾರತೀಯ ಆಯುರ್ವೇದ ಫೆಡರೇಶನ್‌ನ ಸುಳ್ಯ ಘಟಕದ ಅಧ್ಯಕ್ಷ ಡಾ.ಬಿ.ಕೃಷ್ಣಮೂರ್ತಿ, ಡಾ.ಅಪ್ರಮೇಯ ರಾಮನ್, ಡಾ.ಮದನ್ ನಾಡಿಗ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್.ಶೆಟ್ಟರ್ ಸ್ವಾಗತಿಸಿ, ಕಾಲೇಜಿನ ಆಡಳಿತಾಧಿಕಾರಿ ಡಾ.ಲೀಲಾಧರ್.ಡಿ.ವಿ. ಪ್ರಸ್ತಾವನೆಗೈದರು.





