ಸಾಕುನಾಯಿಗಳಿಗೆ ಲೈಸೆನ್ಸ್ ಕಡ್ಡಾಯ! ಮನಪಾ ಪ್ರತ್ಯೇಕ ಸಭೆಗೆ ನಿರ್ಧಾರ

ಮಂಗಳೂರು, ಜ. 26: ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹುಚ್ಚು ನಾಯಿ ಹಾಗೂ ಬೀದಿ ನಾಯಿ ಉಪಟಳ ತಡೆಯುವ ಹಾಗೂ ನಾಯಿಗಳ ಸಂಖ್ಯೆ ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆ ಹೊಸ ತಂತ್ರಗಾರಿಕೆಗೆ ಮುಂದಾಗಿದೆ. ಇನ್ನು ಮುಂದೆ ಮನೆಗಳಲ್ಲಿ ನಾಯಿ ಸಾಕುವವವರು ಮನಪಾದಿಂದ ಕಡ್ಡಾಯವಾಗಿ ಪರವಾನಿಗೆಯನ್ನು ಪಡೆಯಬೇಕಾಗಿದೆ. ಈ ಕುರಿತಾದ ಕಾರ್ಯಸೂಚಿ ಸೋಮವಾರ ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಮಂಡನೆಯಾಗಿದೆ.
ಶ್ವಾನಗಳ ಕ್ರೌರ್ಯ ತಡೆಗಟ್ಟುವ ನಿಟ್ಟಿನಲ್ಲಿ ನಗರಗಳಲ್ಲಿ ‘ಶ್ವಾನ ಕಲ್ಯಾಣ ಸಮಿತಿ’ಯನ್ನು ರಚಿಸಬೇಕಾಗುತ್ತದೆ. ಆಯುಕ್ತರು, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ, ಪಶುಸಂಗೋಪನಾ ವೈದ್ಯಾಧಿಕಾರಿ, ಸರಕಾರೇತರ ಸಂಸ್ಥೆ, ಮನಪಾ ಗುತ್ತಿಗೆದಾರರು, ಆರೋಗ್ಯಾಧಿಕಾರಿ, ಇಬ್ಬರು ಮನಪಾ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲು ಕಾರ್ಯಸೂಚಿಯಲ್ಲಿ ತಿಳಿಸಲಾಗಿದೆ.
ನಗರದ 60 ವಾರ್ಡ್‌ಗಲ್ಲಿ ಮನೆಗಳಲ್ಲಿ ಸಾಕುವ ನಾಯಿಗಳಿಗೆ ಮನಪಾದಿಂದ ಕಡ್ಡಾಯವಾಗಿ ಪರವಾನಿಗೆ ಪಡೆಯುವುದು ಹಾಗೂ ಪ್ರತಿ ವರ್ಷ ನವೀಕರಿಸುವ ಕುರಿತಂತೆ ರಾಜ್ಯ ಸರಕಾರದ ನಿರ್ದೇಶನದ ಮೇರೆಗೆ ಕಾರ್ಯಸೂಚಿ ಮಂಡಿಸಲಾಗಿದೆ ಎಂದು ಮೇಯರ್ ಜೆಸಿಂತಾ ವಿಜಯ ಆಲ್ಪ್ರೆಡ್ ತಿಳಿಸಿದ್ದಾರೆ.
ಇದೇ ವೇಳೆ, ಬೀದಿ ನಾಯಿ ಹಾಗೂ ಸಾಕುನಾಯಿಗಳ ಸರ್ವೆಯನ್ನು ಸರಕಾರೇತರ ಸಂಸ್ಥೆಯಿಂದ ಅಥವಾ ಹೊರಗುತ್ತಿಗೆ ಆಧಾರದಲ್ಲಿ ನಿರ್ವಹಿಸಲು ಹಾಗೂ ಈ ಸರ್ವೆಗೆ ತಗಲುವ ವೆಚ್ಚವನ್ನು ಮನಪಾದ ಸಾಮಾನ್ಯ ನಿಧಿಯಿಂದ ಭರಿಸುವುದು ಹಾಗೂ ಸಾಕು ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ವ್ಯವಸ್ಥೆ ಕಲ್ಪಿಸುವ ಕುರಿತು ಹಾಗೂ ಈ ಶಸ್ತ್ರ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಪಾಲಕರು ಭರಿಸುವ ಕುರಿತಂತೆಯೂ ಪರಿಷತ್ತಿನ ಅನುಮೋದನೆಯನ್ನು ಕಾರ್ಯಸೂಚಿಯಲ್ಲಿ ಕೋರಲಾಗಿದೆ.
ಸೋಮವಾರ ನಡೆದ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವನ್ನು ಮಂಡಿಸಲಾಗಿದ್ದರೂ, ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ. ಮೇಯರ್ ಅಧ್ಯಕ್ಷತೆಯಲ್ಲಿ ಈ ಬಗ್ಗೆ ಸಭೆ ನಡೆಸಿ ಸವಿಸ್ತಾರವಾದ ವರದಿಯನ್ನು ಮುಂದಿನ ಸಭೆಗೆ ಮಂಡಿಸಲು ನಿರ್ಣಯಿಸಲಾಗಿದೆ.







