ಕಳೆದ 18 ವರ್ಷಗಳಲ್ಲಿ ನಮ್ಮ ಸಾಗರಗಳು ಹೊಟ್ಟೆಗೆ ಹಾಕಿಕೊಂಡ ತಾಪಮಾನ ಎಷ್ಟು ಎಂದು ಊಹಿಸಬಲ್ಲಿರಾ ನೀವು ?
ಒಂದು ಹಿರೋಷಿಮಾ ದಾಳಿಯಿಂದ ಕಂಗೆಟ್ಟಿರುವ ನಾವು , ನಾವೇ ನಿರ್ಮಿಸಿದ ತಾಪಮಾನ ಅದರ ಎಷ್ಟು ಪಟ್ಟು ಇದೆ ಎಂದು ಯೋಚಿಸಿದ್ದೆವಾ ?
ಕಳೆದ 18 ವರ್ಷಗಳಲ್ಲಿ ಜಗತ್ತಿನಾದ್ಯಂತ ಸಾಗರಗಳು ತಮ್ಮೊಳಗೆ ಹೀರಿಕೊಂಡ ಮಾನವ ನಿರ್ಮಿತ ತಾಪಮಾನ ಎಷ್ಟು ಎಂದು ನೀವು ಊಹಿಸಬಲ್ಲಿರಾ ? ಇಲ್ಲ . ನಿಮಗೆ ಊಹೆಗೆ ನಿಲುಕದ ಲೆಕ್ಕ ಅದು. ಕೇಳಿದರೆ ಸತ್ತವರನ್ನೂ ಬೆಚ್ಚಿ ಬೀಳಿಸುವಷ್ಟು ಪ್ರಮಾಣದಲ್ಲಿದೆ ಅದು. ಅಪಾರ ನಾಶ ನಷ್ಟಗಳಿಗೆ ಕಾರಣವಾದ ಹಿರೋಷಿಮಾ ಮಾದರಿಯ ಅಣು ಬಾಂಬ್ ದಾಳಿಯಿಂದ ಉಂಟಾಗುವ ತಾಪಮಾನದ ಎರಡು ಬಿಲಿಯನ್ ಪಟ್ಟು ಬಿಸಿಯನ್ನು ನಮ್ಮ ಸಾಗರಗಳು ತಮ್ಮ ಹೊಟ್ಟೆಗೆ ಹಾಕಿಕೊಂಡು ನಮ್ಮನ್ನು ಕಾಪಾಡಿವೆ. ಈ ಅಷ್ಟೂ ಬಿಸಿಯನ್ನು ನಾವು ಮನುಷ್ಯರೇ ನಿರ್ಮಿಸಿದ್ದು ಎಂಬುದನ್ನು ಇತ್ತೀಚಿಗೆ ಬಿಡುಗಡೆಯಾದ ವರದಿಯೊಂದು ತಿಳಿಸಿದೆ.
1865 ರಿಂದ 1997 ರವರೆಗೆ ಜಗತ್ತಿನ ಸಾಗರಗಳು ಸುಮಾರು 150 ಝೆಟಾಜೋಲ್ (ಬಿಸಿಯ ಮಾಪಕ ) ಗಳಷ್ಟು ಬಿಸಿಯನ್ನು ಹೀರಿಕೊಂಡಿವೆ. ಆ ಬಳಿಕ ಮುಂದಿನ 18 ವರ್ಷಗಳಲ್ಲಿ ಅಷ್ಟೇ ಪ್ರಮಾಣದ ತಾಪಮಾನವನ್ನು ನಾವು ಎಲ್ಲರೂ ಸೇರಿ ನಮ್ಮ ಸಾಗರಗಳಿಗೆ ಬಿಟ್ಟಿದ್ದೇವೆ.
ಪ್ರತಿವರ್ಷ ಸೆಕೆಂಡಿಗೆ ಒಂದರಂತೆ ( ಅಂದರೆ 31,53,6000 ಬಾರಿ ) ಹಿರೋಷಿಮಾ ಮಾದರಿಯ ಬಾಂಬ್ ದಾಳಿಯಾದರೆ ಬಿಡುಗಡೆಯಾಗುವ ಒಟ್ಟು ತಾಪಮಾನ ಕೇವಲ 2 ಝೆಟಾಜೋಲ್ ಗಳಷ್ಟು. ಅಂದರೆ , ನೀವೇ ಊಹಿಸಿ 150 ಝೆಟಾಜೋಲ್ ಎಂದರೆ ಎಷ್ಟು ಬಿಸಿಯಾಯಿತು ? ಬಿಡಿ, ಊಹಿಸುವುದು ಕಷ್ಟದ ಮಾತು !
ಕೃಪೆ : ಹಿಂದುಸ್ಥಾನ್ ಟೈಮ್ಸ್