ಭಾರತ ಶಾಸ್ತ್ರೀಯ ಸಂಗೀತ ಪ್ರಸಾರಕ್ಕಾಗಿ ಸಂಗೀತ ವಾಹಿನಿ ಲೋಕಾರ್ಪಣೆ
ಬೆಂಗಳೂರು.ಜ.26: ಭಾರತ ಶಾಸ್ತ್ರೀಯ ಸಂಗೀತ ಪ್ರಸಾರಕ್ಕಾಗಿಯೇ ಮೀಸಲಾದ ರಾಗಂಡಿಟಿಎಚ್ ಶಾಸ್ತ್ರೀಯ ಸಂಗೀತ ವಾಹಿನಿ ಇಂದು ಸಂಜೆ ಲೋಕಾರ್ಪಣೆಗೊಂಡಿದೆ. ದಿನದ 24 ಗಂಟೆಗಳ ಕಾಲ ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸಾರವನ್ನು ಉಪಗ್ರಹ ವಾಹಿನಿ - ಡಿಟಿಎಚ್ ಮೂಲಕ ಹಾಗೂ ಮೊಬೈಲ್ ಅಪ್ ಮೂಲಕ ಆಲಿಸಬಹುದು. ವಿಶ್ವದ ಯಾವುದೇ ಮೂಲೆಗೂ ಭಾರತೀಯ ಶಾಸ್ತ್ರೀಯ ಸಂಗೀತವನ್ನು ತಲುಪಿಸಲಿರುವ ಈ ರಾಗಂವಾಹಿನಿಗೆ ಪ್ರಸಾರ ಭಾರತಿಯ ಅಧ್ಯಕ್ಷ ಡಾ. ಎ. ಸೂರ್ಯಪ್ರಕಾಶ್, ಚಾಲನೆ ನೀಡಿದರು. ಟಿವಿ ಅಥವಾ ಕಂಪ್ಯೂಟರ್ ಮೂಲಕ ಈ ಕಾರ್ಯಕ್ರಮಗಳನ್ನು ಆಲಿಸುವವರು ಡಿಟಿಎಚ್ ಚಾನಲ್ ಮೂಲಕ ಕೇಳಬಹುದು. ಮೊಬೈಲ್ ಮೂಲಕ ಕೇಳುವವರು ಗೂಗಲ್ ಪ್ಲೇಗೆ ಹೋಗಿ ಆಲ್ ಇಂಡಿಯಾ ರೇಡಿಯೋ ಲೈವ್‌ಅನ್ನು ಡೌನ್ ಲೋಡ್ ಮಾಡಿಕೊಂಡರೆ ಅದರಲ್ಲಿ ಆಕಾಶವಾಣಿಯ ಎಲ್ಲಾ ನೇರ ಪ್ರಸಾರ ವಾಹಿನಿಗಳು ಪ್ರದರ್ಶನಗೊಳ್ಳುತ್ತವೆ. ಅದರಲ್ಲಿ ರಾಗಂವಾಹಿನಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ವಾಹಿನಿಯ ತಂತ್ರಾಂಶ ಮತ್ತು ನಿರ್ವಹಣೆಯನ್ನು ಬೆಂಗಳೂರು ಅಕಾಶವಾಣಿ ನಿರ್ವಹಿಸಲಿದ್ದು, ಇದಕ್ಕೆ ದೇಶದ 13 ಇತರ ಕೇಂದ್ರಗಳು ಸಹಕಾರ ನೀಡಲಿವೆ. ಡಿಲ್ಲಿ, ಮುಂಬೈ, ಕೊಲ್ಕತ್ತಾ, ಪುಣೆ, ಧಾರವಾಡ, ಭೂಪಾಲ್ ಮತ್ತು ಲಕ್ನೋ ಕೇಂದ್ರಗಳು ಹಿಂದೂಸ್ತಾನಿ ಸಂಗೀತದ ಧ್ವನಿ ಮುದ್ರಿಕೆಗಳನ್ನು ಹಾಗೂ ಬೆಂಗಳೂರು, ಚೆನ್ನೈ, ತಿರುವಂನಂತಪುರಂ, ತಿರಚಿ, ತ್ರಿಶೂರ್, ಹೈದ್ರಾಬಾದ್, ಮತ್ತು ವಿಜಯವಾಡ ಕೇಂದ್ರಗಳು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಸಾರಕ್ಕಾಗಿ ಒದಗಿಸಲಿದೆ. ರಾಗಂವಾಹಿನಿಯಲ್ಲಿ ಸಂಗೀತ ಭಂಡಾರದ ಆಸ್ತಿಗಳು ಅತಿ ಹಿರಿಯ ಜೀವಂತ ವಿಧ್ವಾಂಸರು, ಉದಯೋನ್ಮುಖ ಸಂಗೀತಗಾರರ ಕೃತಿಗಳನ್ನು ನಿಗದಿಪಡಿಸಿದ ವಿವಿಧ ಸಮಯಗಳಲ್ಲಿ ಕೇಳಬಹುದಾಗಿದೆ. ಪ್ರಖ್ಯಾತ ಸಂಗೀತ ವಿದ್ವಾಂಸರ ವಿವರಣೆ ಮತ್ತು ವಿಶ್ಲೇಷಣೆಗಳ ಪ್ರಸಾರಕ್ಕೂ ಈ ವಾಹಿನಿಯಲ್ಲಿ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ. ನೂತನ ವಾಹಿನಿಯನ್ನು ಬೆಂಗಳೂರು ಆಕಾಶವಾಣಿಯ ಮೂಲಕ ಅಪ್‌ಲಿಂಕ್‌ಮಾಡಲಾಗುತ್ತದಲ್ಲದೆ ಅದು ತನ್ನದೇ ಆದ ತಂತ್ರಾಂಶವನ್ನು ಸೃಷ್ಟಿ ಮಾಡಿಕೊಳ್ಳಲಿದೆ. ಕಾರ್ಯಕ್ರಮದಲ್ಲಿ ಇಸ್ರೋ ನಿವೃತ್ತ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್, ಇನ್‌ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಡಾ. ಸುಧಾಮೂರ್ತಿ, ಆಕಾಶವಾಣಿ ಮಹಾನಿರ್ದೇಶಕ ಶಹರಿಯಾ, ಇಂಜಿನಿಯರ್ ಇನ್-ಚೀಫ್ ಅನಿಮೇಶ್ ಚಕ್ರವರ್ತಿ ಮುಂತಾದ ಗಣ್ಯರು ಭಾಗವಹಿಸಿದ್ದರು.





