ಮುಂಬೈಗೆ ಗುಲಾಂ ಅಲಿ ಭೇಟಿ ಆತಿಥೇಯರಿಂದ ಭದ್ರತೆಗೆ ಕೋರಿಕೆ

ಮುಂಬೈ,ಜ.26: ಖ್ಯಾತ ಪಾಕಿಸ್ತಾನಿ ಗಝಲ್ ಗಾಯಕ ಗುಲಾಂ ಅಲಿ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಗುರುವಾರದಿಂದ ಮುಂಬೈಗೆ ಎರಡು ದಿನಗಳ ಭೇಟಿ ನೀಡಲಿದ್ದಾರೆ. ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಆತಿಥೇಯರು ಮಹಾರಾಷ್ಟ್ರ ಸರಕಾರವನ್ನು ಕೋರಿದ್ದಾರೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇಲ್ಲಿ ಮತ್ತು ಪುಣೆಯಲ್ಲಿ ಏರ್ಪಾಡಾಗಿದ್ದ ಅಲಿಯವರ ಗಝಲ್ ಗಾಯನ ಕಾರ್ಯಕ್ರಮಗಳು ಶಿವಸೇನೆಯ ಪ್ರತಿಭಟನೆಯಿಂದಾಗಿ ರದ್ದುಗೊಂಡಿದ್ದವು.
ಜ.29ರಂದು ಇಲ್ಲಿ ಟಿವಿ ಕಾರ್ಯಕ್ರಮ ನಿರೂಪಕ-ಚಿತ್ರ ನಿರ್ಮಾಪಕ ಸುಹೈಬ್ ಇಲ್ಯಾಸಿಯವರ ನಿರ್ದೇಶನದ ‘ಘರ್ ವಾಪ್ಸಿ’ಚಿತ್ರದ ಸಂಗೀತದ ಬಿಡುಗಡೆ ಕಾರ್ಯಕ್ರಮದಲ್ಲಿ ಅಲಿ ಭಾಗವಹಿಸಲಿದ್ದಾರೆ. ಈ ಚಿತ್ರದಲ್ಲಿ ನಟಿಸಿರುವ ಅವರು ದೇಶಭಕ್ತಿ ಗೀತೆಯೊಂದನ್ನೂ ಹಾಡಿದ್ದಾರೆ.
‘ಇಂಡಿಯಾಸ್ ಮೋಸ್ಟ್ ವಾಂಟೆಡ್’ಕಾರ್ಯಕ್ರಮದ ಮೂಲಕ ಪ್ರಸಿದ್ಧರಾಗಿರುವ ಇಲ್ಯಾಸಿ ಅಲಿಯವರಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ರಾಜ್ಯದ ಬಿಜೆಪಿ ನೇತೃತ್ವದ ಸರಕಾರವನ್ನು ಮತ್ತು ಮುಂಬೈ ಪೊಲೀಸರನ್ನು ಕೋರಿಕೊಂಡಿದ್ದಾರೆ.
ಅಲಿಯವರಿಗೆ ಭದ್ರತೆ ನೀಡುವ ಬಗ್ಗೆ ಅಧಿಕಾರಿಗಳು ನನಗಿನ್ನೂ ದೃಢಪಡಿಸಿಲ್ಲ. ಆದರೆ ಒಂದೆರಡು ದಿನಗಳಲ್ಲಿ ದೃಢೀಕರಣ ಲಭಿಸುವ ಆಶಯವಿದೆ. ಭದ್ರತೆ ದೊರೆಯುತ್ತದೆ ಎನ್ನುವುದು ಖಚಿತ ಪಟ್ಟರೆ ಮಾತ್ರ ನಾವು ಕಾರ್ಯಕ್ರಮವನ್ನು ನಡೆಸುತ್ತೇವೆ ಎಂದು ಇಲ್ಯಾಸಿ ತಿಳಿಸಿದರು. ತನ್ನ ಮುಂಬರುವ ಚಿತ್ರವು ದೇಶದಲ್ಲಿಯ ಅಸಹಿಷ್ಣುತೆ ಕುರಿತಾಗಲಿದೆ ಎಂದರು.
ಚಿತ್ರ ಮತ್ತು ಅದರ ಶೀರ್ಷಿಕೆಯ ಬಗ್ಗೆ ವಿವಾದವನ್ನು ನೀವು ನಿರೀಕ್ಷಿಸಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಇಲ್ಯಾಸ್,ಇಲ್ಲ... ಘರ್ ವಾಪ್ಸಿ ಇಂದು ಬಿಸಿಬಿಸಿ ಚರ್ಚೆಯ ವಿಷಯವಾಗಿದೆ ಎಂದು ಉತ್ತರಿಸಿದರು.







