ದಕ್ಷಿಣ ಆಫ್ರಿಕಕ್ಕೆ ಸಮಾಧಾನಕರ ಜಯ, ಇಂಗ್ಲೆಂಡ್‌ಗೆ ಸರಣಿ

ನಾಲ್ಕನೆ ಟೆಸ್ಟ್: ರಬಾಡ ಅಮೋಘ ಬೌಲಿಂಗ್
ಸೆಂಚೂರಿಯನ್, ಜ.26: ವೇಗದ ಬೌಲರ್ ಕಾಗಿಸೊ ರಬಾಡರ ಕರಾರುವಾಕ್ ಬೌಲಿಂಗ್‌ಗೆ(6-32) ತತ್ತರಿಸಿದ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕ ವಿರುದ್ಧದ ನಾಲ್ಕನೆ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು 280 ರನ್‌ಗಳ ಅಂತರದಿಂದ ಸೋತಿದೆ.
ಈಗಾಗಲೇ ಸರಣಿಯನ್ನು 1-2 ರಿಂದ ಕಳೆದುಕೊಂಡಿರುವ ದಕ್ಷಿಣ ಆಫ್ರಿಕ ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಸಮಾಧಾನಕರ ಗೆಲುವು ಪಡೆಯಿತು.
20ರ ಹರೆಯದ ರಬಾಡ ಪಂದ್ಯದಲ್ಲಿ ಒಟ್ಟು 13 ವಿಕೆಟ್ ಕಬಳಿಸಿದರು. ಈ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ 13 ವಿಕೆಟ್ ಪಡೆದ ದಕ್ಷಿಣ ಆಫ್ರಿಕದ ಮೂರನೆ ವೇಗದ ಬೌಲರ್ ಎಂಬ ಕೀರ್ತಿಗೆ ಭಾಜನರಾದರು. ಹ್ಯೂ ಟೇಫೀಲ್ಡ್ ಹಾಗೂ ಮಕಾಯ ಎನ್‌ಟಿನಿ ಪಂದ್ಯವೊಂದರಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದರು.
ಇಂಗ್ಲೆಂಡ್ ಗೆಲುವಿಗೆ 382 ರನ್ ಗುರಿ ಪಡೆದಿತ್ತು. ಅಂತಿಮ ದಿನವಾದ ಮಂಗಳವಾರ 3 ವಿಕೆಟ್ ನಷ್ಟಕ್ಕೆ 52 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ಆದರೆ, ಇಂಗ್ಲೆಂಡ್ 13 ಓವರ್‌ಗಳಲ್ಲಿ 49 ರನ್ ಗಳಿಸುವಷ್ಟರಲ್ಲಿ ಉಳಿದ ಏಳು ವಿಕೆಟ್‌ಗಳನ್ನು ಕಳೆದುಕೊಂಡು 101 ರನ್‌ಗೆ ಆಲೌಟಾಯಿತು.
ಆಫ್ರಿಕ ನೆಲದಲ್ಲಿ ಎರಡನೆ ಕನಿಷ್ಠ ಸ್ಕೋರ್‌ಗೆ ಕುಸಿಯಿತು. 1899ರಲ್ಲಿ ಕೇಪ್‌ಟೌನ್‌ನಲ್ಲಿ 92 ರನ್‌ಗೆ ಆಲೌಟಾಗಿತ್ತು. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ರಿಂದ ಜಯಿಸಿರುವ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕ ನೆಲದಲ್ಲಿ 11 ವರ್ಷಗಳ ನಂತರ ಸರಣಿ ಗೆದ್ದ ಸಾಧನೆ ಮಾಡಿತು.
ದಕ್ಷಿಣ ಆಫ್ರಿಕ ತಂಡದ ಹೊಸ ನಾಯಕ ಎಬಿ ಡಿವಿಲಿಯರ್ಸ್‌ಗೆ ನಾಲ್ಕನೆ ಪಂದ್ಯದಲ್ಲಿನ ಗೆಲುವು ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ.







