ಮಿಶ್ರ ಡಬಲ್ಸ್: ಸಾನಿಯಾಗೆ ಪೇಸ್ ಎದುರಾಳಿ

ಮೆಲ್ಬೋರ್ನ್, ಜ.26: ಆಸ್ಟ್ರೇಲಿಯನ್ ಓಪನ್‌ನ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿರುವ ಸಾನಿಯಾ ಮಿರ್ಝಾ ಮುಂದಿನ ಸುತ್ತಿನಲ್ಲಿ ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಸವಾಲು ಎದುರಿಸಲಿದ್ದಾರೆ.
ಅಗ್ರ ಶ್ರೇಯಾಂಕದ ಸಾನಿಯಾ ಹಾಗೂ ಕ್ರೊವೇಷಿಯದ ಐವಾನ್ ಡೊಡಿಗ್ ಶ್ರೇಯಾಂಕರಹಿತ ಕಝಕ್-ಪಾಕಿಸ್ತಾನದ ಜೋಡಿ ಯರೊಸ್ಲಾವಾ ಶ್ವೆಡೋವಾ ಹಾಗೂ ಐಸಾಮ್ ಉಲ್-ಹಕ್ ಖುರೇಷಿ ಅವರನ್ನು 7-5, 6-2 ಸೆಟ್‌ಗಳ ಅಂತರದಿಂದ ಮಣಿಸಿದರು.
ಮತ್ತೊಂದು ಮಿಶ್ರ ಡಬಲ್ಸ್ ಪಂದ್ಯದಲ್ಲಿ ಪೇಸ್ ಹಾಗೂ ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ಜೋಡಿ ಅಮೆರಿಕ-ಡಚ್‌ನ ಸ್ಲೊಯಾನೆ ಸ್ಟೆಫನ್ಸ್ ಹಾಗೂ ಜಿಯನ್-ಜುಲಿಯೆನ್ ರೊಜೆರ್‌ರನ್ನು 6-1, 6-2 ಸೆಟ್‌ಗಳ ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಈ ಫಲಿತಾಂಶದಿಂದಾಗಿ ಸಾನಿಯಾ ಹಾಗೂ ಪೇಸ್ ಮಿಶ್ರ ಡಬಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.
ಮಹಿಳೆಯರ ಡಬಲ್ಸ್: ಸಾನಿಯಾ-ಮಾರ್ಟಿನಾ ಸೆಮಿ ಫೈನಲ್‌ಗೆ
ಮೆಲ್ಬೋರ್ನ್, ಜ.26: ವಿಶ್ವದ ನಂ.1 ಡಬಲ್ಸ್ ಜೋಡಿ ಸಾನಿಯಾ ಮಿರ್ಝಾ ಹಾಗೂ ಮಾರ್ಟಿನಾ ಹಿಂಗಿಸ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತೇರ್ಗಡೆಯಾಗಿದ್ದಾರೆ.
ಮಂಗಳವಾರ ನಡೆದ ಮಹಿಳೆಯರ ಡಬಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸಾನಿಯಾ ಹಾಗೂ ಮಾರ್ಟಿನಾ ಅವರು 12ನೆ ಶ್ರೇಯಾಂಕದ ಜರ್ಮನಿ-ಅಮೆರಿಕದ ಜೋಡಿ ಅನ್ನಾ-ಲೆನಾ ಗ್ರಾಯೆನ್‌ಫೆಲ್ಡ್ ಹಾಗೂ ಕೊಕೊ ವ್ಯಾಂಡಿವೇಗ್‌ರನ್ನು 6-2, 4-6, 6-1 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
2015ರ ಮಾರ್ಚ್‌ನಲ್ಲಿ ಜೊತೆಯಾಗಿರುವ ಸಾನಿಯಾ-ಮಾರ್ಟಿನಾ 2 ಗ್ರಾನ್‌ಸ್ಲಾಮ್ ಟ್ರೋಫಿ ಸಹಿತ ಒಟ್ಟು 11 ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಸಾನಿಯಾ-ಮಾರ್ಟಿನಾ ಮುಂದಿನ ಸುತ್ತಿನಲ್ಲಿ 13ನೆ ಶ್ರೇಯಾಂಕದ ಜುಲಿಯಾ ಜಾರ್ಜಸ್ ಹಾಗೂ ಕ್ಯಾರೊಲಿನಾ ಪ್ಲಿಸ್ಕೋವಾರನ್ನು ಎದುರಿಸಲಿದ್ದಾರೆ.







