ಭಯೋತ್ಪಾದನೆ ವಿರುದ್ಧ ಇರಾನ್ ನಿರಂತರ ಸಮರ: ರೂಹಾನಿ ಘೋಷಣೆ
ರೋಮ್, ಜ.26: ಭಯೋತ್ಪಾದನೆಯ ವಿರುದ್ಧ ಕಟ್ಟಕಡೆಯವರೆಗೂ ತನ್ನ ದೇಶವು ಯಾವುದೇ ಸಂದಿಗ್ಧತೆಯಿಲ್ಲದೆ ಸಮರ ಸಾರುವುದಾಗಿ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಘೋಷಿಸಿದ್ದಾರೆ.
ಯುರೋಪ್ ಪ್ರವಾಸದಲ್ಲಿರುವ ರೂಹಾನಿ, ಸೋಮವಾರ ರೋಮ್‌ನಲ್ಲಿ ಇಟಲಿ ಅಧ್ಯಕ್ಷ ಸರ್ಗಿಯೊ ಮ್ಯಾಟರೆಲ್ಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮ್ಯಾಟೆರೆಲ್ಲಾ ಅವರು ಮಾತನಾಡಿ, ಭಯೋತ್ಪಾದನೆಯು ಅಂತಾರಾಷ್ಟ್ರೀಯ ಸಮುದಾಯ ಎದುರಿಸುತ್ತಿರುವ ಪ್ರಮುಖ ಬೆದರಿಕೆಗಳಲ್ಲೊಂದಾಗಿದೆಯೆಂದು ಹೇಳಿದ್ದಾರೆ. ತನ್ನ ಯುರೋಪ್ ಪ್ರವಾಸದ ಅಂಗವಾಗಿ ರೂಹಾನಿ ಇಟಲಿ ಹಾಗೂ ಫ್ರಾನ್ಸ್ ದೇಶಗಳನ್ನು ಸಂದರ್ಶಿಸುತ್ತಿದ್ದಾರೆ. ಇರಾನ್‌ನ ನಾಯಕರೊಬ್ಬರು ಸುಮಾರು 16 ವರ್ಷಗಳ ಬಳಿಕ ಯುರೋಪ್‌ಗೆ ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಯೆಮೆನ್, ಸಿರಿಯ ಹಾಗೂ ಲಿಬಿಯ ಸೇರಿದಂತೆ ಪ್ರಾದೇಶಿಕ ಸಂಘರ್ಷಗಳನ್ನು ಬಗೆಹರಿಸಲು ರಾಜತಾಂತ್ರಿಕತೆ ಹಾಗೂ ಮಾತುಕತೆಯೊಂದೇ ದಾರಿ ಎಂಬುದನ್ನು ಇಬ್ಬರೂ ನಾಯಕರು ಮಾತುಕತೆಯ ವೇಳೆ ಒಪ್ಪಿಕೊಂಡರು.





