ಗಡಿಪಾರಿಗೆ ‘ಚರ್ಮದ ಬಣ್ಣ ’ಕಾರಣವಾಯಿತೇ?
ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಬಂಧನ
ಲಂಡನ್,ಜ.26: ಉದ್ಯಮ ಪ್ರವಾಸದ ನಿಮಿತ್ತವಾಗಿ ಲಂಡನ್‌ನಿಂದ ಅಮೆರಿಕಕ್ಕೆ ಆಗಮಿಸಿದ್ದ, ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯೊಬ್ಬನನ್ನು, ಚರ್ಮದ ಬಣ್ಣದ ಕಾರಣಕ್ಕಾಗಿ ಅವರನ್ನು ವಲಸೆ ಅಧಿಕಾರಿಗಳು 13 ತಾಸುಗಳವರೆಗೆ ತಮ್ಮ ವಶದಲ್ಲಿರಿಸಿಕೊಂಡು, ಆನಂತರ ಗಡಿಪಾರು ಮಾಡಿದ ಘಟನೆ ಮಂಗಳವಾರ ವರದಿಯಾಗಿದೆ
ಅಮೆರಿಕದ ಭದ್ರತಾ ಕಂಪೆನಿಯೊಂದರ ಪರವಾಗಿ ಕೆಲಸ ಮಾಡುತ್ತಿರುವ ಅಮ್ರಿತ್ ಸುರಾನಾ, ಅರಿರೆನಾದಲ್ಲಿರುವ ತನ್ನ ಸಂಸ್ಥೆಯ ಶಾಖಾ ಕಚೇರಿಗೆ ತೆರಳಲು ವಿಮಾನಕ್ಕಾಗಿ ಡೆಟ್ರಾಯಿಟ್ ವಿಮಾನನಿಲ್ದಾಣದಲ್ಲಿ ಕಾಯುತ್ತಿದ್ದಾಗ ಅವರನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದರು. ತನ್ನ ಬಳಿ ಯುರೋಪ್ ಸೇರಿದಂತೆ 38 ದೇಶಗಳ ಪೌರರಿಗೆ ಅಮೆರಿಕದಲ್ಲಿ ವೀಸಾ ರಹಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಇಎಸ್‌ಟಿಎ ಪರವಾನಿಗೆಯಿದ್ದರೂ, ತನ್ನನ್ನು ವಲಸೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆಂದು 24 ವರ್ಷ ವಯಸ್ಸಿನ ಸುರಾನಾ ತಿಳಿಸಿದ್ದಾರೆ.
‘‘ನನ್ನ ಚರ್ಮದ ಬಣ್ಣದ ಕಾರಣದಿಂದಾಗಿ ನನ್ನನ್ನು ಅವರು ವಶಕ್ಕೆತೆಗೆದುಕೊಂಡಿದ್ದಾರೆಂದು ತಾನು ಭಾವಿಸಿರುವುದಾಗಿ ಸುರಾನಾ ಆರೋಪಿಸಿದ್ದಾರೆ. ಆದರೆ ಸುರಾನಾ ಅವರ ಗಡಿಪಾರಿಗೆ ಅಮೆರಿಕದ ಕಸ್ಟಮ್ಸ್ ಹಾಗೂ ಗಡಿರಕ್ಷಣೆ (ಸಿಬಿಪಿ) ಇಲಾಖೆ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ. ತನ್ನನ್ನು ವಿಚಾರಣೆ ನಡೆಸಿದ ವಲಸೆ ಅಧಿಕಾರಿಗಳು ತಾನೋರ್ವ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಅಕ್ರಮ ವಲಸಿಗನೆಂದು ಭಾವಿಸಿದ್ದರೆಂದು ಸುರಾನಾ ಹೇಳಿದರು. ತನ್ನನ್ನು ವಂಚಕನೆಂದು ನಿಂದಿಸಿದ ಅಧಿಕಾರಿಗಳು, ಜೈಲಿಗೆ ಹಾಕುವ ಬೆದರಿಕೆಯನ್ನೂ ಒಡ್ಡಿದರೆಂದು ಅವರು ಆರೋಪಿಸಿದ್ದಾರೆ. ಸುಮಾರು 13 ತಾಸುಗಳ ಕಾಲ ತನ್ನನ್ನು ವಶಕ್ಕೆ ತೆಗೆದುಕೊಂಡ ವಲಸೆ ಅಧಿಕಾರಿಗಳು ಆನಂತರ ಬ್ರಿಟನ್‌ಗೆ ತನ್ನನ್ನು ಗಡಿಪಾರು ಮಾಡಿದರೆಂದು ಸುರಾನಾ ಆಪಾದಿಸಿದ್ದಾರೆ.





