ಭ್ರಷ್ಟಾಚಾರ ಹಗರಣದಿಂದ ನಜೀಬ್ ದೋಷಮುಕ್ತಿ

681 ಮಿಲಿಯ ಡಾಲರ್ ದೇಣಿಗೆ ಹಗರಣ
ಕೌಲಾಲಂಪುರ,ಜ.26: ಮಲೇಶ್ಯದಲ್ಲಿ ಭಾರೀ ಕೋಲಾಹಲವನ್ನು ಸೃಷ್ಟಿಸಿದ್ದ ಭ್ರಷ್ಟಾಚಾರ ಹಗರಣದಲ್ಲಿ ಪ್ರಧಾನಿ ನಜೀಬ್ ರಝಾಕ್‌ರನ್ನು ದೇಶದ ಅಟಾರ್ನಿ ಜನರಲ್ ದೋಷಮುಕ್ತಗೊಳಿಸಿದ್ದಾರೆ. ನಜೀಬ್ ಅವರು ತನ್ನ ಬ್ಯಾಂಕ್ ಖಾತೆಯ ಮೂಲಕ ಸ್ವೀಕರಿಸಿರುವ 681 ದಶಲಕ್ಷ ಡಾಲರ್‌ಗಳು, ಸೌದಿ ರಾಜಕುಟುಂಬದಿಂದ ಬಂದ ವೈಯಕ್ತಿಕ ದೇಣಿಗೆಯಾಗಿತ್ತೆಂದು ಅಟಾರ್ನಿ ಜನರಲ್ ಅವರ ಕಚೇರಿಯ ಪ್ರಕಟನೆ ತಿಳಿಸಿದೆ. ಈ ಹಣವು ಸರಕಾರಿ ಒಡೆತನದ ಹೂಡಿಕೆದಾರ ಸಂಸ್ಥೆ ‘1ಎಂಡಿಬಿ’ಯಿಂದ ನಜೀಬ್ ಅವರ ಖಾತೆಗೆ ಜಮಾಗೊಂಡಿತ್ತೆಂದು, ಪ್ರತಿಪಕ್ಷಗಳು ಆಪಾದಿಸಿದ್ದವು. ಆದರೆ ನಜೀಬ್ ತನ್ನ ಮೇಲಿನ ಆರೋಪಗಳನ್ನು ನಿರಂತರವಾಗಿ ನಿರಾಕರಿಸುತ್ತಲೇ ಬಂದಿದ್ದರು. ಈ ಹಗರಣಕ್ಕೆ ಸಂಬಂಧಿಸಿ ರಾಜೀನಾಮೆ ನೀಡುವಂತೆ ಪ್ರತಿಪಕ್ಷಗಳಿಂದ ಭಾರೀ ಒತ್ತಡವನ್ನು ಕೂಡಾ ಅವರು ಎದುರಿಸಿದ್ದರು. ಇದಕ್ಕೂ ಮುನ್ನ ಮಲೇಶ್ಯದ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು, ನಜೀಬ್ ಸ್ವೀಕರಿಸಿರುವ ಹಣವು ವಿದೇಶಿ ದೇಣಿಗೆದಾರನೊಬ್ಬನಿಂದ ಬಂದಿರುವುದಾಗಿ ಹೇಳಿದ್ದರು.
ಕೊನೆಗೂ ಈ ವಿವಾದಗಳಿಗೆ ತೆರೆಯೆಳೆದಿರುವ ಮಲೇಶ್ಯದ ಅಟಾರ್ನಿ ಜನರಲ್ ಮುಹಮ್ಮದ್ ಅಪಾಂದಿ ಅಲಿ ಇಂದು ಹೇಳಿಕೆಯೊಂದನ್ನು ನೀಡಿ, ಈ ಮೊತ್ತವು ಸೌದಿ ಅರೇಬಿಯದ ರಾಜಕುಟುಂಬದಿಂದ ದೊರೆತ ವೈಯಕ್ತಿಕ ದೇಣಿಗೆಯಾಗಿದ್ದು, ಅದು 2013ರ ಮಾರ್ಚ್ ಅಂತ್ಯದಲ್ಲಿ ಹಾಗೂ ಎಪ್ರಿಲ್ ಆರಂಭದಲ್ಲಿ ವರ್ಗಾವಣೆಯಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದೇಣಿಗೆದಾರನೆಂದು ಗುರುತಿಸಲ್ಪಟ್ಟ ವ್ಯಕ್ತಿ ಸೇರಿದಂತೆ ಹಲವು ಸಾಕ್ಷಿದಾರರನ್ನು ಭೇಟಿಯಾಗಿದ್ದರು ಎಂದವರು ತಿಳಿಸಿದರು. ಈ ದೇಣಿಗೆಯನ್ನು ಲಂಚದ ರೂಪದಲ್ಲಿ ನೀಡಲಾಗಿದೆಯೆಂಬುದನ್ನು ತೋರಿಸುವ ಯಾವುದೇ ಸಾಕ್ಷಾಧಾರಗಳು ದೊರೆತಿಲ್ಲವೆಂದು ಅಟಾರ್ನಿ ಜನರಲ್‌ತಿಳಿಸಿದ್ದಾರೆ. ಪ್ರಧಾನಿ ಹುದ್ದೆಯನ್ನು ಬಳಸಿಕೊಂಡು, ವಶೀಲಿಯನ್ನು ಮಾಡುವುದಕ್ಕಾಗಿ ಈ ದೇಣಿಗೆಯನ್ನು ನೀಡಲಾಗಿದೆಯೆಂಬುದಕ್ಕೆ ಸಾಕ್ಷಾಧಾರಗಳು ಲಭ್ಯವಿಲ್ಲವೆಂದವರು ಹೇಳಿದ್ದಾರೆ.





