ಥಾಯ್ಲೆಂಡ್‌ನಲ್ಲಿ ದೊರೆತ ಅವಶೇಷ ಎಂಎಚ್370 ವಿಮಾನದ್ದಲ್ಲ: ಮಲೇಶ್ಯ ಸ್ಪಷ್ಟನೆ
ಕೌಲಾಲಂಪುರ,ಜ.26: ಥಾಯ್ಲೆಂಡ್‌ನಲ್ಲಿ ಇತ್ತೀಚೆಗೆ ಪತ್ತೆಯಾದ ವಿಮಾನದ ಅವಶೇಷಗಳು, ದೀರ್ಘಸಮಯದಿಂದ ಕಣ್ಮರೆಯಾಗಿರುವ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್ 370 ವಿಮಾನಕ್ಕೆ ಸೇರಿದ್ದಲ್ಲವೆಂದು ಮಲೇಶ್ಯದ ಸಾರಿಗೆ ಸಚಿವ ಲಿಯೊವ್ ಟಿಯೊಂಗ್ ಲಾಯ್ ಮಂಗಳವಾರ ಸ್ಪಷ್ಟೀಕರಣ ನೀಡಿದ್ದಾರೆ. ಕಳೆದ ವಾರ ಥಾಯ್ಲೆಂಡ್‌ನಲ್ಲಿ ದೊರೆತ ಲೋಹದ ವಸ್ತುವೊಂದು, ನಾಪತ್ತೆಯಾಗಿರುವ ಎಂಎಚ್ 370 ವಿಮಾನದ್ದಾಗಿರಬೇಕೆಂಬ ಮಾಧ್ಯಮಗಳಲ್ಲಿ ಸಂದೇಹಗಳು ವ್ಯಕ್ತವಾಗಿದ್ದವು.
ಥಾಯ್ಲೆಂಡ್‌ನಲ್ಲಿ ದೊರೆತ ಅವಶೇಷಗಳನ್ನು ಮಲೇಶ್ಯದ ನಾಗರಿಕ ವಾಯುಯಾನ, ಸಾರಿಗೆ ಸಚಿವಾಲಯ ಹಾಗೂ ಮಲೇಶ್ಯನ್ ಏರ್‌ಲೈನ್ಸ್‌ನ ಅಧಿಕಾರಿಗಳು ಕೂಲಂಕುಶವಾಗಿ ಪರಿಶೀಲಿಸಿದ್ದಾರೆ.ಅವಶೇಷದ ಭಾಗದ ಅಸೆಂಬ್ಲಿ ಸಂಖ್ಯೆ, ವಯರ್ ಬಂಡಲ್ ಸಂಖ್ಯೆ ಹಾಗೂ ಬೋಲ್ಟ್ಸ್ ಭಾಗದ ಸಂಖ್ಯೆಯು, ನಾಪತ್ತೆಯಾದ ಎಂಎಚ್ 370 ವಿಮಾನಕ್ಕೆ ಹೊಂದಿಕೆಯಾಗುವುದಿಲ್ಲವೆಂದು ಸಚಿವ ಲಿಯೊವ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಈ ಮಧ್ಯೆ ನಾಪತ್ತೆಯಾದ ಮಲೇಶ್ಯನ್ ಏರ್‌ಲೈನ್‌ನ ಎಂಎಚ್ 370 ವಿಮಾನಕ್ಕಾಗಿ ಹಿಂದೂಮಹಾಸಾಗರ ಪ್ರದೇಶದಲ್ಲಿ ಶೋಧ ಕಾರ್ಯದಲ್ಲಿ ನಿರತವಾಗಿದ್ದ ಸೋನಾರ್ ವಾಹನವೊಂದು ನಾಪತ್ತೆಯಾಗಿರುವುದಾಗಿ ವರದಿಗಳು ತಿಳಿಸಿವೆ. ಸಮುದ್ರದಾಳದಲ್ಲಿರುವ ಅಗ್ನಿಪರ್ವತಕ್ಕೆ ಢಿಕ್ಕಿ ಹೊಡೆದ ಬಳಿಕ ಸೋನಾರ್ ವಾಹನವು ನಾಪತ್ತೆಯಾಗಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.





