ವರ್ಷಕ್ಕೆ ಎರಡು ಬಾರಿ ಸನ್ನಡತೆ ಆಧಾರದಲ್ಲಿ ಕೈದಿಗಳ ಬಿಡುಗಡೆ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಜ.26: ಸನ್ನಡತೆ ಆಧಾರದಲ್ಲಿ ವರ್ಷಕ್ಕೆ ಎರಡು ಬಾರಿ ಕೈದಿಗಳನ್ನು ಬಿಡುಗಡೆ ಮಾಡುವ ಕುರಿತು ಗಂಭೀರವಾಗಿ ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ನಗರದ ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದಿಂದ ಸನ್ನಡತೆ ಆಧಾರದಲ್ಲಿ ಬಿಡುಗಡೆಯಾದ 98 ಕೈದಿಗಳ ಮುಂದಿನ ಭವಿಷ್ಯಕ್ಕೆ ಶುಭಕೋರಿ ಅವರು ಮಾತನಾಡಿದರು. ರಾಜ್ಯದ ವಿವಿಧ ಕಾರಾಗೃಹಗಳಿಂದ 375 ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಬೆಂಗಳೂರು ಕಾರಾಗೃಹದಿಂದ ಬಿಡುಗಡೆಯಾಗುತ್ತಿರುವ 98 ಕೈದಿಗಳ ಪೈಕಿ 93 ಮಂದಿ ಪುರುಷರು ಹಾಗೂ 5 ಮಂದಿ ಮಹಿಳೆಯರಿದ್ದಾರೆ ಎಂದು ಅವರು ಹೇಳಿದರು.
ಸನ್ನಡತೆ ಆಧಾರದ ಕೈದಿಗಳ ಬಿಡುಗಡೆ ವಿಚಾರವು ಸೋಮವಾರ ಸಂಜೆಯವರೆಗೆ ಕಗ್ಗಂಟಾಗಿಯೆ ಇತ್ತು. ಸಚಿವ ಸಂಪುಟದಲ್ಲಿ ಕೈದಿಗಳ ಪಟ್ಟಿಗೆ ಒಪ್ಪಿಗೆ ಪಡೆಯುವುದರ ಜೊತೆಗೆ ಅಂದು ಸಂಜೆಯೆ ನಾವು ಕಳುಹಿಸಿದ್ದ ಪಟ್ಟಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದು ನಿಮ್ಮೆಲ್ಲರ ಅದೃಷ್ಟ ಎಂದು ಪರಮೇಶ್ವರ್ ತಿಳಿಸಿದರು.
ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಹೊಸ ವರ್ಷ ಆಚರಿಸಲು ಈ ಕಾರಾಗೃಹಕ್ಕೆ ಭೇಟಿ ನೀಡಿದ್ದೆ. ಆಗ ಕೈದಿಗಳನ್ನು ಭೇಟಿ ಮಾಡಿ ಅವರ ಕುಂದು ಕೊರತೆಗಳನ್ನು ಆಲಿಸಿದ್ದೆ. ಅಲ್ಲದೆ, ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದೆ. ಅದರಂತೆ, ನಡೆದುಕೊಂಡಿದ್ದೇನೆ ಎಂದು ಅವರು ಹೇಳಿದರು.
ಮನುಷ್ಯ ಹುಟ್ಟುತ್ತಲೆ ಅಪರಾಧಿಯಾಗುವುದಿಲ್ಲ. ಸಮಯ, ಸಂದರ್ಭ ಮನುಷ್ಯನನ್ನು ಆ ರೀತಿ ಮಾಡುತ್ತದೆ. ಕಾರಾಗೃಹಗಳು ಎಂಬುದು ಅಪರಾಧಿಗಳಿಗೆ ಶಿಕ್ಷೆ ನೀಡುವುದಲ್ಲ ಅವರ ಮನಸ್ಸನ್ನು ಪರಿವರ್ತನೆ ಮಾಡುವ ಕೇಂದ್ರಗಳಾಗಿ ಮಾರ್ಪಾಡು ಆಗಬೇಕು. ಮುಂದಿನ ದಿನಗಳಲ್ಲಿ ಹೆಚ್ಚಾಗಿ ವೃದ್ಧರು ಹಾಗೂ ಮಹಿಳೆಯರನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಪ್ರಯತ್ನ ಪಡುತ್ತೇವೆ ಎಂದು ಪರಮೇಶ್ವರ್ ನುಡಿದರು.
ಶಿಕ್ಷೆಯನ್ನು ಅನುಭವಿಸುತ್ತಲೆ ತಮ್ಮ ತಪ್ಪಿನ ಅರಿವಾಗಿ ಸನ್ನಡತೆಯನ್ನು ಮೈಗೂಡಿಸಿಕೊಂಡು ಇಂದು ಬಿಡುಗಡೆಯಾಗುತ್ತಿರುವ ಕೈದಿಗಳು, ಸಮಾಜದಲ್ಲಿ ಇನ್ನು ಮುಂದೆ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ಅವರು ಹಾರೈಸಿದರು.
ಸಮಾರಂಭದಲ್ಲಿ ಗೃಹ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಎಸ್.ಕೆ.ಪಟ್ನಾಯಕ್, ಪ್ರಧಾನ ಕಾರ್ಯದರ್ಶಿ ಗಗನ್‌ದೀಪ್, ಜೈಲಿನ ಅಧೀಕ್ಷಕ ಶೇಷಮೂರ್ತಿ, ಉಪಮಹಾನಿರೀಕ್ಷಕ ಕೃಷ್ಣಕುಮಾರ್, ಬೆಂಗಳೂರು ಕಾರಾಗೃಹ ಸಲಹಾ ಸಮಿತಿ ಸದಸ್ಯ ಅಬ್ದುರ್ರಹ್ಮಾನ್‌ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







