ಮಹಿಳೆಯರ ದೇಗುಲ ಪ್ರವೇಶ ಯತ್ನ ವಿಫಲ

ಪೊಲೀಸ್ ಪಡೆಯಿಂದ ಅಡ್ಡಿ
ನೂರಾರು ಭೂಮಾತಾ ಬ್ರಿಗೇಡ್ ಕಾರ್ಯಕರ್ತೆಯರ ಬಂಧನ
ಅಹ್ಮದ್‌ನಗರ, ಜ.26: ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಶನಿಶಿಂಗ್ಣಾಪುರದ ಶನಿ ದೇವರ ಮಂದಿರದ ಬಯಲು ಗರ್ಭಗುಡಿಗೆ ನುಗ್ಗುವ 350 ಮಂದಿ ಮಹಿಳೆಯರ ಯೋಜನೆಯೊಂದನ್ನು ಪೊಲೀಸರಿಂದು ಭಗ್ನಗೊಳಿಸಿದ್ದಾರೆ.
ಕಾರ್ಯಕರ್ತೆಯರನ್ನು ದೇವಾಲಯಕ್ಕೆ 70 ಕಿ.ಮೀ. ದೂರದ ಗ್ರಾಮವೊಂದರಲ್ಲೇ ಅವರು ತಡೆದಿದ್ದಾರೆ.
ಭೂಮಾತಾ ಬ್ರಿಗೇಡ್ ಎಂಬ ಹಣೆಪಟ್ಟಿಯಲ್ಲಿ, ಅಧ್ಯಕ್ಷೆ ತೃಪ್ತಿ ದೇಸಾಯಿ ಎಂಬವರ ನೇತೃತ್ವದಲ್ಲಿ ಪುಣೆಯಿಂದ ಬಸ್ಸುಗಳಲ್ಲಿ ಬಂದಿದ್ದ ಕಾರ್ಯಕರ್ತೆಯರು ಸುಪಾ ಗ್ರಾಮವನ್ನು ತಲುಪಿದೊಡನೆಯೇ ಪೊಲೀಸ್ ಸಿಬ್ಬಂದಿ ವೃತ್ತವೊಂದನ್ನು ನಿರ್ಮಿಸಿ, ಅವರು ದೇವಾಲಯದತ್ತ ಸಾಗದಂತೆ ತಡೆದರು.
ದೇಸಾಯಿಯವರನ್ನು ವಶಪಡಿಸಿಕೊಂಡ ಪೊಲೀಸರು ಸುಪಾ ಠಾಣೆಗೆ ಕರೆದೊಯ್ದರು.
ಪೊಲೀಸರ ಕಾರ್ಯಾಚರಣೆಯನ್ನು ಬಲವಾಗಿ ವಿರೋಧಿಸಿದ ಕಾರ್ಯಕರ್ತೆಯರು ರಸ್ತೆಯ ಮೇಲೆಯೇ ಮಲಗಿ, ‘ಗಣರಾಜ್ಯೋತ್ಸವದ ದಿನ ಮಹಿಳೆಯರಿಗೆ ಕಪ್ಪುದಿನ’ ಎಂದು ಘೋಷಣೆ ಕೂಗತೊಡಗಿದರು.
ದೇವಾಲಯದೊಳಗೆ ತಮ್ಮನ್ನು ಪ್ರವೇಶಿಸಲು ಬಿಡದಿದ್ದಲ್ಲಿ ಮಂಗಳವಾರ ಹೆಲಿಕಾಪ್ಟರ್ ಮೂಲಕ ನೂಲೇಣಿಯ ಸಹಾಯದಿಂದ ಕಾರ್ಯಕರ್ತೆಯರನ್ನು ಇಳಿಸಲಾಗುವುದೆಂದು ಸೋಮವಾರ ಹೇಳಿದ್ದರು.
ಮಹಿಳೆಯರು ಗರ್ಭಗೃಹ ಪ್ರವೇಶಿಸುವುದಕ್ಕೆ ಅಲ್ಲಿ ನಿಷೇಧವಿದೆ. ಸುಮಾರು 350 ಮಂದಿ ಮಹಿಳೆಯರನ್ನು ಪೊಲೀಸರು ಸುಷಾದಲ್ಲಿ ತಡೆದಿದ್ದಾರೆ. ಮಹಿಳೆಯರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪಂಕಜ್ ದೇಶಮುಖ್ ತಿಳಿಸಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಮಹಿಳೆಯೊಬ್ಬಳು ವಿಗ್ರಹವಿರುವ ವೇದಿಕೆಯನ್ನೇರಿ ಪ್ರಾರ್ಥನೆ ಸಲ್ಲಿಸಿದ್ದಳು. ಬಳಿಕ ಪೂಜಾರಿಗಳು ಪ್ರದೇಶವನ್ನು ಹಾಲು ಹಾಗೂ ಎಣ್ಣೆಗಳಿಂದ ‘ಶುದ್ಧ’ ಮಾಡಿದ್ದರು. ಅದರ ನಂತರ, ಮಹಿಳೆಯರ ಪ್ರವೇಶ ನಿರ್ಬಂಧದ ವಿರುದ್ಧ ಪ್ರತಿಭಟನೆ ಹಾಗೂ ಅಭಿಯಾನಗಳು ಆರಂಭಗೊಂಡಿವೆ.







