ಎಳೆಯರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ
ಕೆಲ ತಿಂಗಳ ಹಿಂದೆ ಮಂಗಳೂರಿನಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಪ್ರಮುಖ ಭಾಷಣ ಮಾಡಿದ ಸುಮಾರು 20 ರ ಆಸುಪಾಸಿನ ಹರೆಯದ ಸಾದ್ವಿ ಬಾಲಿಕಾ ಸರಸ್ವತಿ, ‘ಲವ್ ಜಿಹಾದ್ ನಡೆಸುವವರ ವಿರುದ್ಧ ಹಿಂದೂಗಳು ಕತ್ತಿ ಹಿಡಿಯಬೇಕು ಮತ್ತು ಅಂತಹವರನ್ನು ಹತ್ಯೆ ಮಾಡಬೇಕು’ ಎಂದು ಕರೆಕೊಟ್ಟಳು. ಪ್ರೀತಿ, ಪ್ರಣಯ ಎಂದೆಲ್ಲ ಕನಸು ಕಾಣುವ ವಯಸ್ಸಿನಲ್ಲಿ ತನ್ನ ಒಡಲ ತುಂಬಾ ‘ಹೊಡಿ ಬಡಿ ಕೊಲ್ಲಿ’ ಎಂಬೆಲ್ಲ ದ್ವೇಷದ ಮಹಾಪೂರವನ್ನೇ ತುಂಬಿಕೊಂಡ ಆಕೆಯ ಮನಸ್ಥಿತಿ ನನ್ನ ಭಾವ ಪ್ರಪಂಚವನ್ನು ಕಲಕಿ ಬಿಟ್ಟಿತು. ಆಕೆಯ ವರ್ತನೆಗೆ ಕಾರಣವಾಗಿರಬಹುದಾದ ಕೆಲ ಅಂಶಗಳು ನನ್ನ ವಿಮರ್ಶಾ ಪ್ರಜ್ಞೆಗೆ ದಕ್ಕುತ್ತಿದಂತೆಯೇ ಇದಕ್ಕೆ ಪೂರಕವಾಗಬಹುದಾದ ಮತ್ತೂ ಒಂದಷ್ಟು ಪ್ರಕರಣಗಳು ನನ್ನ ನೆನಪಿನ ಬುತ್ತಿಯಿಂದ ಈಚೆ ಬಂದವು.
ಮೂರು ನಾಲ್ಕು ವರ್ಷಗಳ ಹಿಂದಿನ ಘಟನೆ. ಮುದ್ದಾದ ಕೈಬರಹದಲ್ಲಿ ನನ್ನ ಕಚೇರಿಯ ವಿಳಾಸಕ್ಕೆ ಪತ್ರವೊಂದು ಬಂದಿತ್ತು. ಸೊಗಸಾದ ಕನ್ನಡದಲ್ಲಿ ಸಾಹಿತ್ಯಭರಿತ ಭಾಷೆಯಲ್ಲಿ ಬರೆದ ಮಾರುದ್ದದ ಓಲೆ. ಪದವಿಪೂರ್ವ ತರಗತಿಯಲ್ಲಿ ಓದುತ್ತಿರುವ ಕಿಶೋರಿಯೊಬ್ಬಳು ತನ್ನ ಮನದ ತೊಳಲಾಟಗಳನ್ನು ಅತ್ಯಂತ ಭಾವುಕವಾಗಿ ಮತ್ತು ಆಪ್ತವಾಗಿ ಅದರಲ್ಲಿ ತೋಡಿಕೊಂಡಿದ್ದಳು. ನಾನು ಆಗೊಮ್ಮೆ ಈಗೊಮ್ಮೆ ಬರೆಯುತ್ತಿರುವ ಕೆಲ ಲೇಖನಗಳನ್ನು ಓದಿ ಆಕೆಯ ಎಲ್ಲ ಸಮಸ್ಯೆಗಳಿಗೆ ನಾನು ಪರಿಹಾರ ಕೊಡಬಲ್ಲವಳು ಎಂದು ತಿಳಿದುಕೊಂಡೋ ಏನೋ, ‘ನನ್ನಲ್ಲಿ ಈ ದಿನಗಳಲ್ಲಿ ತುಂಬಾ ದೇಶ ಪ್ರೇಮ ಮೂಡುತ್ತಿದೆ, ಓದಿಗಿಂತ ಹೆಚ್ಚಾಗಿ ನನ್ನ ಗಮನ ದೇಶದ ಹಿತಾಸಕ್ತಿಯತ್ತಲೇ ವಾಲುತ್ತಿದೆ, ನಾನು ನನ್ನ ದೇಶಕ್ಕೆ ಏನನ್ನಾದರೂ ಕೊಡಬೇಕು, ನನಗೆ ದಾರಿ ತೋರಿಸಿ’ ಎಂದು ಸಮಸ್ಯೆಯನ್ನು ನಿವೇದಿಸಿಕೊಂಡಿದ್ದಳು. ಜತೆಗೆ, ‘ನಾನೀಗ ಕತೆ ಕವನಗಳನ್ನು ಬರೆಯಲು ಆರಂಭಿಸಿರುವೆ, ಅದು ನನಗೆ ಅಪಾರ ಆನಂದವನ್ನು ಕೊಡುತ್ತಿದೆ’ ಎಂದು ಬರೆಯುತ್ತಾ, ನನ್ನ ಮೇಲೆಯೇ ಪುಟ್ಟ ಕವನವೊಂದನ್ನು ಬರೆದು ಕಳುಹಿಸಿದ್ದಳು.
ಇನ್ನೂ ಹದಿ ಹರೆಯದ ಹುಡುಗಿ, ಚೆನ್ನಾಗಿ ಓದಿ ತನ್ನ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಂಡು ಸುಂದರ, ಸುಭದ್ರ ಭವಿಷ್ಯವನ್ನು ಕಟ್ಟಿಕೊಳ್ಳಬೇಕಾದ, ತನ್ನ ಬರವಣಿಗೆಯ ಶಕ್ತಿಯನ್ನು ಸರಿಯಾದ ದಿಕ್ಕಿಗೆ ಹರಿಸಿದರೆ ಒಂದು ಒಳ್ಳೆಯ ಸಾಹಿತ್ಯ ಪ್ರತಿಭೆಯಾಗಬಹುದಾದ ಹುಡುಗಿ ಈ ಹರೆಯದಲ್ಲಿಯೇ ಓದು ಬೇಡವೆನಿಸುತ್ತಿದೆ, ದೇಶದ ಬಗೆಗಿನ ಚಿಂತೆಯೇ ಅಧಿಕವಾಗುತ್ತಿದೆ ಎಂದರೆ ಯಾರಿಗೆ ತಾನೇ ದಿಗಿಲಾಗದೆ ಇರಲು ಸಾಧ್ಯ?
ಪ್ರತಿಷ್ಠಿತ ಕಾಲೇಜಿನ ಪದವಿಪೂರ್ವ ವಿದ್ಯಾರ್ಥಿಗಳಿಗೆ ಹದಿಹರೆಯದ ಶಿಕ್ಷಣದ ತರಬೇತಿ ನೀಡಲು ಹೋದಾಗಿನ ಸಂಗತಿ ಇದು. ತರಬೇತಿಯ ಕೊನೆಯ ಭಾಗದಲ್ಲಿ, ‘ನೀವು ನಿಮ್ಮ ಆದರ್ಶ ವ್ಯಕ್ತಿಯನ್ನಾಗಿ ಯಾರನ್ನು ಸ್ವೀಕರಿಸಲು ಇಷ್ಟಪಡುತ್ತೀರಿ?’ ಎಂದು ಕೇಳಿದಾಗ, ಹೆಚ್ಚಿನ ವಿದ್ಯಾರ್ಥಿಗಳು ‘ಕಿರಣ್‌ಬೇಡಿ, ಇಂದಿರಾ ಗಾಂಧಿ, ಅಬ್ದುಲ್ ಕಲಾಂ’ ಎಂದೆಲ್ಲಾ ಹೆಸರಿಸಿದರೆ, ‘ನಾಥೂರಾಮ್ ಗೋಡ್ಸೆ’ ಎಂದಿದ್ದಳು ಕೊನೆಯ ಬೆಂಚಿನಲ್ಲಿದ್ದ ಹುಡುಗಿ! ಆಘಾತದಿಂದ ಸಾವರಿಸಿಕೊಂಡು, ಆ ವ್ಯಕ್ತಿ ನಿಮಗೇಕೆ ಇಷ್ಟ? ಎಂದು ಕೇಳಿದರೆ, ‘ಗಾಂಧಿ ಒಳ್ಳೆಯವರಲ್ಲ, ಅವರನ್ನು ಕೊಂದು ಒಳ್ಳೆಯ ಕೆಲಸ ಮಾಡಿದ್ದಾರೆ. ದೇಶ ಉದ್ಧಾರವಾಗಬೇಕಾದರೆ ಇಂಥವರೆಲ್ಲ ಇರಲೇ ಬಾರದು’ ಎಂದಳು ಕೊಂಚವೂ ಅಳುಕದೆ. ನಿಮಗೆ ಇದನ್ನೆಲ್ಲ ಯಾರು ಹೇಳಿಕೊಟ್ಟರು? ಎಂದು ಮತ್ತೆ ಪ್ರಶ್ನಿಸಿದರೆ, ‘ನಮ್ಮ ಮನೆಯಲ್ಲಿ ಇಂತಹ ಹಲವಾರು ಪುಸ್ತಕಗಳಿವೆ, ನಾನು ಅವನ್ನೆಲ್ಲಾ ಓದಿದ್ದೇನೆ’ ಎಂದು ಮುಗ್ಧವಾಗಿ ಅಂದಿದ್ದಳು.
ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ನನ್ನೊಬ್ಬ ಮಾಧ್ಯಮ ಮಿತ್ರರು ಒಂದಷ್ಟು ಹೊತ್ತು ಮಾತಿಗೆ ಸಿಕ್ಕಿದ್ದರು. ‘ಬಹುತೇಕ ಮಾಧ್ಯಮಗಳು ಬಲಪಂಥೀಯ ಒಲವಿನಿಂದಲೇ ಬರೆಯುತ್ತಿವೆಯಲ್ಲಾ... ನೀವು ಬ್ಯೂರೋ ಮುಖ್ಯಸ್ಥರಲ್ಲವೇ, ಏನಾಗಿದೆ ನಿಮಗೆಲ್ಲಾ?’ ಅಂದೆ. ತಟ್ಟನೆ, ‘ಮೇಡಮ್, ಪತ್ರಿಕೋದ್ಯಮ ಕಲಿಯ ಹೊರಡುವ ಹೆಚ್ಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಎಡಪಂಥೀಯ ಚಿಂತನೆಗಳನ್ನು ತಮ್ಮೊಂದಿಗೆ ಒಯ್ಯುತ್ತಾರೆ. ಅಲ್ಲಿಂದ ಹೊರಬರುವಾಗ ಬಲಪಂಥೀಯರಾಗಿ ಹೊರಬರುತ್ತಾರೆ. ನಿಮಗಿದು ತಿಳಿದಿರಲಿ’ ಎಂದು ಮಾತು ಮುಗಿಸಿದ್ದರು. ಆ ದಿನಗಳಲ್ಲೇ ಲೇಖಕ ಬಿ. ಎಂ. ಬಶೀರ್ ಬಲಪಂಥೀಯ ವಿಚಾರಧಾರೆಗಳೊಂದಿಗೆ ತಮ್ಮ ಪತ್ರಿಕೆಯಲ್ಲಿ ಕೆಲಸ ಮಾಡಲು ಬರುವ ವರದಿಗಾರರನ್ನು ಸರಿ ಮಾಡಲು ಪಡುವ ಪಡಿಪಾಟಲುಗಳನ್ನು ಕುರಿತು ಬರೆದುದನ್ನು ಓದಿದ್ದೆ. ಸಂವಿಧಾನ, ಅದರ ಆಶಯ, ಬಹುಸಂಸ್ಕೃತಿ, ಕೋಮು ಸೌಹಾರ್ಧ ಇತ್ಯಾದಿಗಳ ಕುರಿತು ಕಲಿತು ಜನರನ್ನು ತಿದ್ದುವ, ಬದಲಾಯಿಸುವ, ಸಮಾಜದ ತಲ್ಲಣಗಳಿಗೆ ಸ್ಪಂದಿಸುವ ಕನಸು ಕಾಣುವ ಜೀವಪರ ಚೇತನಗಳಾಗಿ ಮೂಡಬೇಕಾದವರು ರೂಪುಗೊಳ್ಳುತ್ತಿರುವ ಪರಿಯನ್ನು ನೋಡುವಾಗ ವಿಷಾದವೆನಿಸಿತು.
ದೇಶಪ್ರೇಮ, ದೇಶಸೇವೆ, ದೇಶೋದ್ಧಾರ ಇತ್ಯಾದಿ ತುಡಿತಗಳು ಎಲ್ಲರಲ್ಲೂ ಇರಬೇಕಾದದ್ದೇ. ಆದರೆ, ಓದುವ ವಯಸ್ಸಿನಲ್ಲಿ ತಾವು ಮಾಡಬೇಕಾದ ನಿರ್ದಿಷ್ಟ ಕೆಲಸಗಳನ್ನು ನಿರ್ಲಕ್ಷಿಸಿದರೆ ಕಳೆದ ಕಾಲ ಮತ್ತೆ ಮರಳುವುದಿಲ್ಲ. ದೇಶ, ಭಾಷೆ, ಜಾತಿ, ಮತ ಎಂದೆಲ್ಲ ತಲೆ ತುಂಬಿಸಿಕೊಂಡು ಓದಿನಲ್ಲಿ ಹಿಂದೆ ಬಿದ್ದರೆ ವ್ಯಕ್ತಿಗತ ವಿಕಸನದ ಗತಿ ಏನಾದೀತು? ಎಳೆಯ ಪ್ರಜೆಗಳೆಲ್ಲರೂ ಇದೇ ಜಾಡಿನಲ್ಲಿ ಸಾಗಿದರೆ ದೇಶದ ಕತೆ ಏನಾದೀತು?
ಇತ್ತೀಚಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕರ್ನಾಟಕದ ಯುವಜನತೆ ಕೋಮುವಾದ ಮತ್ತು ಜಾತೀಯತೆಗೆ ವೇಗವಾಗಿ ಬಲಿಯಾಗುತ್ತಿದೆ. ಜನಪರ, ಜೀವಪರ ಹೋರಾಟಗಳ ಭಾಗವಾಗಬೇಕಿದ್ದ ಯುವಶಕ್ತಿ ಜಾತ್ಯತೀತತೆ, ಪರಮತ ಸಹಿಷ್ಣುತೆಯನ್ನು ಮೈಗೂಡಿಸಿಕೊಂಡಿರಬೇಕಾದ ಯುವಪೀಳಿಗೆ ಮತೀಯತೆಯನ್ನು ಅಂತರ್ಗತ ಮಾಡಿಕೊಳ್ಳುವ ವೇಗವನ್ನು ಗಮನಿಸಿದರೆ ಯಾರಿಗೇ ಆದರೂ ಇದು ಮುಂದಿನ ರಕ್ತಸಿಕ್ತ ಇತಿಹಾಸಕ್ಕೆ ನಾವೇ ಬರೆದುಕೊಳ್ಳುತ್ತಿರುವ ಮುನ್ನುಡಿ ಎಂದು ಅನಿಸದಿರಲಾರದು.
ಸ್ವತಂತ್ರ ಆಲೋಚನೆ ಮತ್ತು ವಿವೇಚನೆಯ ಶಕ್ತಿ ಇನ್ನೂ ಮೂಡಿರದ, ಕೋಮಲ ಹರೆಯದಲ್ಲಿ ಹುಟ್ಟುವ ಆಲೋಚನೆಗಳ ಮೇಲೆ ನಿಯಂತ್ರಣ ಸಾಧಿಸದಿದ್ದರೆ ಅವು ದುರಂತಗಳಿಗೆ ಕಾರಣವಾಗಬಹುದು ಎಂಬುದಕ್ಕೆ ಅಸಂಖ್ಯ ಉದಾಹರಣೆಗಳು ನಮ್ಮ ಮುಂದಿವೆ. ಕೇವಲ ಹರೆಯದ ಕಾರಣದಿಂದಾಗಿ ಉಂಟಾಗುವ ಇಂತಹ ಭಾವನೆಗಳನ್ನು ಬಡಿದೆಬ್ಬಿಸಿ ಇಂತಹ ಮಂದಿಯನ್ನು ತಪ್ಪು ದಾರಿಗೆಳೆಯುವುದು, ದುರುಪಯೋಗ ಪಡಿಸಿಕೊಳ್ಳುವುದು ಚಿಟಿಕೆ ಹೊಡೆದಷ್ಟೇ ಸುಲಭದ ಕೆಲಸ. ಮಕ್ಕಳ ಮನಸ್ಸು ಹಸಿ ಮಣ್ಣಿನ ಹಾಗೆ ಎಂಬುದು ಎಲ್ಲರಿಗೂ ಗೊತ್ತು. ಅದರ ಮೇಲೆ ಏನು ಬರೆದರೂ ಅದು ಯಥಾರೂಪದಲ್ಲಿ ಪಡಿಮೂಡುತ್ತದೆ ಎಂಬುದೂ ಗೊತ್ತು. ಇಷ್ಟು ಗೊತ್ತಿದ್ದೂ ಈಗ ಆಗುತ್ತಿರುವುದೇನು? ಮಕ್ಕಳೆಂಬ ಬಣ್ಣ ಬಣ್ಣದ ಹೂಗಳಿರುವ ತೋಟಕ್ಕೆ ಕೋಮು ಎಂಬ ವಿಷಕೀಟವನ್ನು ದಾಟಿಸಿಬಿಡಲಾಗಿದೆ. ಈ ಕೀಟ ಬಾಧೆಯಿಂದಾಗಿ ಆ ತೋಟದಲ್ಲಿ ಯಾವ ಹೂವುಗಳೂ ಸುಂದರವಾಗಿ ಅರಳಲಾರವು. ಕ್ರಮೇಣ ಯಾವ ಗಿಡಗಳೂ ಉಳಿಯಲಾರವು.
ಉದಾಹರಣೆಗೆ ಕರ್ನಾಟಕದ ಕರಾವಳಿಯಲ್ಲಿ ನಡೆಯುತ್ತಿರುವ ಗಂಡಾಂತರಕಾರಿ ವಿದ್ಯಮಾನಗಳನ್ನೇ ಗಮನಿಸಿ. ಇಲ್ಲಿ ಹದಿಹರೆಯದ ಶಾಲಾ ಮಕ್ಕಳ ಮನಸ್ಸಿನಲ್ಲಿ ದೊಡ್ಡ ಪ್ರಮಾಣದಲ್ಲಿ ಕೋಮು ವಿಷವನ್ನು ತುಂಬಲಾಗುತ್ತಿದೆ. ಭಗತ್‌ಸಿಂಗ್, ಸ್ವಾಮಿ ವಿವೇಕಾನಂದ ಎಲ್ಲರನ್ನೂ ಈ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ನಾಥೂರಾಮ್ ಗೋಡ್ಸೆ, ಸಾವರ್ಕರ್ ಮೊದಲಾದವರನ್ನು ಹೀರೋಗಳಾಗಿ ಮತ್ತು ಮಹಾತ್ಮಾ ಗಾಂಧಿ, ನೆಹರೂ ಮೊದಲಾದವರನ್ನು ವಿಲನ್‌ಗಳಾಗಿ ಬಿಂಬಿಸಲಾಗುತ್ತಿದೆ. ಹೆಚ್ಚಿನ ಶಾಲಾ ಕಾಲೇಜುಗಳಲ್ಲಿಯೂ ಈ ಮೂಲಭೂತವಾದಿ ಸಂಘಟನೆಗಳು ತಮ್ಮ ವಿಷ ಜಾಲವನ್ನು ಹರಡುತ್ತಿವೆ. ಜಾತಿ, ಮತ ಭೇದಗಳನ್ನು ಮರೆತು ಒಂದಾಗಿ ಕಲಿಯಬೇಕಾದ ವಿದ್ಯಾದೇಗುಲಗಳಲ್ಲಿ ಕೋಮು ಆಧಾರದಲ್ಲಿ ಮಕ್ಕಳನ್ನು ವಿಭಜಿಸಲಾಗುತ್ತಿದೆ. ತಮ್ಮ ಅಧಿಕಾರ ರಾಜಕಾರಣಕ್ಕೆ ಈ ಮಕ್ಕಳನ್ನು ಬಳಸಿಕೊಂಡು ಅವರನ್ನು ಬೀದಿಗೆ ತರಲಾಗುತ್ತಿದೆ, ತಳ್ಳಲಾಗುತ್ತಿದೆ. ಸಂಘರ್ಷಕ್ಕೆ ಪ್ರಚೋದಿಸಲಾಗುತ್ತಿದೆ. ಚಿಲ್ಲರೆ ವಿಷಯಗಳಿಗೆ ಅವರು ಕೋಮು ನೆಲೆಯಲ್ಲಿ ಹೊಡೆದಾಡಿಕೊಂಡು ಪೊಲೀಸ್ ಠಾಣೆ ಸೇರಿ ಹತ್ತಾರು ಕೇಸುಗಳನ್ನು ಜಡಿಸಿಕೊಂಡು ಕೋರ್ಟುಕಛೇರಿಗೆ ಅಲೆಯುವಂತೆ, ನ್ಯಾಯಾಲಯದ ಕಟೆಕಟೆಯಲ್ಲಿ ನಿಲ್ಲುವಂತೆ ಮಾಡಲಾಗುತ್ತಿದೆ. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಹಿಂದೂ ಹೃದಯ ಸಂಗಮ ಸಮಾವೇಶ ಮುಗಿಸಿ ತೆರಳುತ್ತಿದ್ದ ಸಂದರ್ಭದಲ್ಲಿ ಕರಾಯ ಎಂಬಲ್ಲಿ ಮಸೀದಿಯ ಮೇಲೆ ನಡೆದಿದೆ ಎನ್ನಲಾದ ಕಲ್ಲು ತೂರಾಟಕ್ಕೆ ಸಂಬಂಧಿಸಿ ಪ್ರತಿಷ್ಠಿತ ಕಾಲೇಜಿನ ಹಿಂದೂ ವಿದ್ಯಾರ್ಥಿ ಯೋರ್ವನ ಗುರುತು ಚೀಟಿ ಮಸೀದಿಯ ಆವರಣದಲ್ಲಿ ದೊರೆತಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಪೊಲೀಸ್ ಠಾಣೆಯಲ್ಲಿ ಒಮ್ಮೆ ಕೇಸು ದಾಖಲಾಯಿತೆಂದರೆ ಮುಂದೆ ತಮ್ಮ ಔದ್ಯೋಗಿಕ ಭವಿಷ್ಯದ ಮೇಲೆ ಯಾವ ಪರಿಣಾಮ ಉಂಟಾಗುತ್ತದೆ ಎಂಬ ಸತ್ಯ ಇಂತಹ ದೇಶಪ್ರೇಮಿ ಮಕ್ಕಳಿಗೆ ಗೊತ್ತಿದೆಯೇ? ಸೂತ್ರದಾರರು ಅವರಿಗೆ ಈ ಸತ್ಯವನ್ನು ಹೇಳುವುದೂ ಇಲ್ಲ. ಈ ಮಕ್ಕಳನ್ನು ದೇಶಸೇವೆಗೆ ಛೂಬಿಟ್ಟು ಅವರ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿರುವ ಸೂತ್ರದಾರ ಮೇಲ್ವರ್ಗದವರಾದರೋ ತಮ್ಮ ಮೇಲೆ ಪೆಟ್ಟಿ ಕೇಸುಗಳೂ ದಾಖಲಾಗದಂತೆ ಬುದ್ಧಿವಂತಿಕೆಯಿಂದ ಕಾರ್ಯಾಚರಿಸುತ್ತಾರೆ. ಅವರ ಮಕ್ಕಳು ದೇಶದ ಮತ್ತು ವಿದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದು ನಡೆಸಿ ಕೈ ತುಂಬ ಸಂಬಳ ತರುವ ಕೆಲಸಗಳನ್ನು ಹಿಡಿದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ದೇಶಕ್ಕಾಗಿ ಹೋರಾಡುವ ಮಹತ್ತರ ಹೊಣೆಯನ್ನು ಸಮಾಜದ ಬಡ ಮತ್ತು ತಳಸಮುದಾಯಗಳ ಮಕ್ಕಳ ಮೇಲೆ ಹೊರಿಸಿ ಅವರೆಲ್ಲ ನಿಶ್ಚಿಂತೆಯಿಂದಿದ್ದಾರೆ. ಮುಸ್ಲಿಮ್ ಮೂಲಭೂತವಾದಿ ಸಂಘಟನೆಗಳ ಪರಿಸ್ಥಿತಿಯೂ ಇದಕ್ಕಿಂತ ಹೊರತಲ್ಲ.
ಮಕ್ಕಳಲ್ಲಿ ಸರ್ವ ಸಮಭಾವ ಮತ್ತು ಸಾಮರಸ್ಯದ ಗುಣ ಅಭಿಜಾತವಾಗಿಯೇ ಬಂದಿರುತ್ತದೆ. ಆದರೆ, ಹಿರಿಯರಾದ ನಾವು ಅವರಿಗೆ ಎಂತಹ ಪರಿಸರ ಒದಗಿಸಿಕೊಡುತ್ತೇವೆ ಎಂಬುದರ ಮೇಲೆ ಅವರು ತಮ್ಮ ಮನಸ್ಸಿನ ಮುಗ್ಧತೆಯನ್ನು, ಪರಿಶುದ್ಧತೆಯನ್ನು ಉಳಿಸಿಕೊಳ್ಳುವುದು ಸಾಧ್ಯ. ಮಕ್ಕಳ ಕೋಮಲ ಮನಸ್ಸಿನಲ್ಲಿ ಜಾತಿ, ಮತ, ಭಾಷೆ ಭೇದಗಳ ವಿಷಬೀಜ ಬಿತ್ತಿ ದ್ವೇಷಾಸೂಯೆಗಳನ್ನು ಉಣಿಸಿದರೆ ಗೋಡ್ಸೆಯಂತಹ ಜೀವವಿರೋಧಿಗಳು ಸಂಸ್ಕೃತಿಯ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ಅಟ್ಟಾಡಿಸಿ ಹೊಡೆಯುವ ಸಮಾಜ ವಿರೋಧಿಗಳೆಲ್ಲ ಅವರಿಗೆ ಆದರ್ಶಪ್ರಾಯರಾಗಿಯೇ ಕಂಡುಬರುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಮನ್ನಿಸದಿರುವವರು ದೇಶದ್ರೋಹಿಗಳಾಗಿ ಕಂಡುಬರುತ್ತಾರೆ. ಅಂತಿಮವಾಗಿ ಅವರನ್ನೆಲ್ಲ ಕೊಂದುಬಿಡುವುದೇ ಸರಿ ಎಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ!
ಇದಕ್ಕೆ ಆ ಎಳೆಯರನ್ನು ದೂರುವಹಾಗಿಲ್ಲ. ಒಂದು ಆರೋಗ್ಯಪೂರ್ಣ ಸಮಾಜ ಭವಿಷ್ಯದಲ್ಲಿ ರೂಪುಗೊಳ್ಳಬೇಕಾದರೆ ಯುವಜನತೆ ತಮ್ಮ ಕೆಲಸಗಳನ್ನು ನಿಷ್ಠೆಯಿಂದ ಮಾಡುವುದಕ್ಕಿಂತ ದೊಡ್ಡ ದೇಶಸೇವೆ ಇನ್ನೊಂದಿಲ್ಲ ಎನ್ನುವುದನ್ನು ಮತ್ತೆ ಮತ್ತೆ ನೆನಪಿಸುತ್ತಾ ಸರಿಯಾದ ದಿಕ್ಕಿಗೆ ಅವರನ್ನು ತಿರುಗಿಸುತ್ತಿರಬೇಕು. ಮಕ್ಕಳು ಹೀಗೆ ಬೆಳೆದಾಗ ಸಹಜವಾಗಿಯೇ ಅವರು ಮಾಡುವ ಎಲ್ಲ ಕೆಲಸವೂ ನಿಜವಾದ ದೇಶಸೇವೆಯಾಗುತ್ತದೆ. ಗೋಡ್ಸೆ ಯಾರು? ಅವರ ದೇಶಪ್ರೇಮ ಎಂತಹದು? ಅವರ ನಿಜವಾದ ಹುನ್ನಾರ ಏನು? ಎಂಬುದನ್ನು ವಿಶ್ಲೇಷಿಸಬಲ್ಲವರಾಗುತ್ತಾರೆ. ಆದ್ದರಿಂದ ಯಾರದೋ ಅಜೆಂಡಾಗಳಿಗೆ
ಯಾರ್ಯರೋ ಬಲಿಯಾಗುತ್ತಿರುವ ಈ ಆತಂಕಕಾರಿ ಕಾಲದಲ್ಲಿ ಎಳೆಯ ಮನಸುಗಳು ಮತಾಂಧತೆಯಲ್ಲಿ ಕಳೆದುಹೋಗದಂತೆ ಅವರ ಮಗುತನವನ್ನು ಸಂರಕ್ಷಿಸಿಕೊಂಡು ಹೋಗುವ ಹಾದಿಗಾಗಿ ನಾವು ಹುಡುಕಾಟ ನಡೆಸಬೇಕಿದೆ.







