ಕೇರಳ: ಸೋಲಾರ್ ಲಂಚ ಹಗರಣ ಹೊಸ ತಿರುವಿನತ್ತ

ಮುಖ್ಯಮಂತ್ರಿ ಉಮ್ಮನ್‌ಚಾಂಡಿಗೆ 1.90ಕೋಟಿ ರೂ. ಸಚಿವ ಆರ್ಯಾಡನ್‌ರಿಗೆ 40ಲಕ್ಷ ರೂ. ಪಾವತಿಸಿದ್ದೆ: ಸರಿತಾ
ಕೊಚ್ಚಿ: ಮುಖ್ಯಮಂತ್ರಿ ಉಮ್ಮನ್ ಚಾಂಡಿಗೆ ಒಂದು ಕೋಟಿ ತೊಂಬತ್ತು ಲಕ್ಷ ಹಾಗೂ ವಿದ್ಯುತ್ ಸಚಿವ ಆರ್ಯಾಡನ್ ಮುಹಮ್ಮದ್‌ರಿಗೆ ಎರಡು ಬಾರಿಯಾಗಿ 40ಲಕ್ಷ ಹಣವನ್ನು ನೀಡಿದ್ದೇನೆಂದು ಸೋಲಾರ್ ಪ್ರಕರಣದ ಆರೋಪಿ ಸರಿತಾ ಎಸ್. ನಾಯರ್ ಹೇಳಿಕೊಂಡಿದ್ದಾರೆ. ಸೋಲಾರ್ ಆಯೋಗದ ಮುಂದೆ ಅವರು ಈ ರೀತಿ ಸಾಕ್ಷಿ ನುಡಿದಿದ್ದಾರೆ. ಮುಖ್ಯಮಂತ್ರಿಗೆ ಕೊಡಲಿಕ್ಕಾಗಿ ದಿಲ್ಲಿಯ ಚಾಂದ್‌ನಿ ಚೌಕ್‌ನಲ್ಲಿ ಥಾಮಸ್ ಕುರವಿಲ್ಲಾರ ಬಳಿ ಒಂದು ಕೋಟಿ ಹತ್ತು ಲಕ್ಷ ರೂ, ನೀಡಿದ್ದೇನೆ. 80 ಲಕ್ಷ ಹಣವನ್ನು ತಿರುವನಂತಪುರದ ಮನೆಗೆ ತಲುಪಿಸಿದ್ದೇನೆ ಎಂದ ಅವರು ಆರ್ಯಾಡನ್‌ರಿಗೆ ಅವರ ಅಧಿಕೃತ ವಸತಿ ಮನ್‌ಮೋಹನ್ ಬಂಗ್ಲೆಯಲ್ಲಿ ಮೊದಲಬಾರಿ 25 ಲಕ್ಷ ರೂ. ಮತ್ತು ಆ ನಂತರ ಸ್ಟಾಫ್ ಮುಖಾಂತರ ಹದಿನೈದು ಲಕ್ಷ ರೂ. ನೀಡಿದ್ದೇನೆ. ಮುಖ್ಯ ಮಂತ್ರಿ ಸೂಚನೆಯಂತೆ ಆರ್ಯಾಡನ್‌ರನ್ನು ಭೇಟಿಯಾಗಿದ್ದೆ . ಆರ್ಯಾಡನ್ ಪಿಎ ಕೇಶವನ್ ಎಂಬವರು ಎರಡು ಕೋಟಿರೂ. ಕೇಳಿದ್ದರೆಂದು ಸರಿತಾ ಸಾಕ್ಷಿ ಹೇಳಿದ್ದಾರೆ. 2011 ಜೂನ್‌ನಲ್ಲಿ ಟೀಂ ಸೋಲಾರ್ ವಿನಂತಿಯಂತೆ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೆ. ಗಣೇಶ್‌ಕುಮಾರ್‌ರ ಪಿಎ ಮುಖ್ಯಮಂತ್ರಿಯ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದರು. ಮುಖ್ಯಮಂತ್ರಿ ಆರ್ಯಾಡನ್‌ರಿಗೆ ಕರೆ ಮಾಡಿ ಒಬ್ಬರು ಮನವಿಯೊಂದಿಗೆ ಬರುತ್ತಿದ್ದಾರೆ ಪರಿಶೀಲಿಸಬೇಕೆಂದು ಹೇಳಿದ್ದರು. ಅನರ್‌ಟ್ ಜೊತೆ ಸೋಲಾರ್ ಯೋಜನೆ ಕಾರ್ಯರೂಪಕ್ಕೆ ತರಲು ಬಯಸಿದ್ದೆ. ಇದಕ್ಕೆ ಸೌಕರ್ಯ ಒದಗಿಸಲು ಆರ್ಯಾಡನ್ ಒಪ್ಪಿಗೆ ಸೂಚಿಸಿದ್ದರು. ಕಲ್ಲಡದ ಇರಿಗೇಶನ್ ಯೋಜನೆಯ ಸ್ಥಳವನ್ನು ಸಂದರ್ಶಿಸಲು ಅನುಮತಿ ನೀಡಿದ್ದರು. ಮುಖ್ಯಮಂತ್ರಿಯನ್ನು ಆನಂತರ ಹಲವು ಬಾರಿ ಭೇಟಿಯಾಗಿದ್ದೇನೆ ಎಷ್ಟು ಬಾರಿ ಎಂದು ನೆನಪಿಲ್ಲ ಎಂದಿದ್ದಾರೆ. ಅವರು ಪಿಎಯ ಮೂಲಕ ಏಳು ಕೋಟಿ ರೂ. ಕೇಳಿದ್ದರೆಂದು ಸರಿತಾಆಯೋಗದ ಮುಂದೆ ಸಾಕ್ಷಿ ನುಡಿದಿದ್ದಾರೆ. ಸರಿತಾ ಹೇಳಿಕೆಯನ್ನು ಮುಂದಿಟ್ಟು ಪ್ರತಿಪಕ್ಷಗಳು ಮುಖ್ಯಮಂತ್ರಿ ಮತ್ತು ವಿದ್ಯುತ್ ಸಚಿವರ ರಾಜಿನಾಮೆಗೆ ಆಗ್ರಹಿಸಿವೆ.
ಸರಿತಾ ಸುಳ್ಳು ಹೇಳುತ್ತಿದ್ದಾರೆ: ಉಮ್ಮನ್ ಚಾಂಡಿ
ತಿರುವನಂತಪುರಂ: ಸೋಲಾರ್ ಲಂಚ ಹಗರಣಕ್ಕೆ ಸಂಬಂಧಿಸಿ ಸೋಲಾರ್ ಆಯೋಗದ ಮುಂದೆ ಸರಿತಾ ನೀಡಿದ ಹೇಳಿಕೆಯನ್ನು ಮುಖ್ಯಂತ್ರಿ ಉಮ್ಮನ್ ಚಾಂಡಿ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಮುಖ್ಯಮಂತ್ರಿಯ ಪರಿಹಾರ ನಿಧಿಗೆ ಅವರು ನೀಡಿದ್ದ ಚೆಕ್‌ಕೂಡ ಮರಳಿ ಹೋಗಿದೆ. ಈ ಸರಿತಾ ನನಗೆ ಕೋಟಿಗಳನ್ನು ನೀಡಿದ್ದಾರೆ ಎಂದರೆ ಯಾರಾದರೂ ನಂಬಿಯಾರೇ? ಮಾತ್ರವಲ್ಲ ಅಷ್ಟು ಹಣ ನೀಡಿದ್ದರೆ ಅದರಿಂದ ಅವರು ಏನು ಸಾಧಿಸಿದರು ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ. ಸಚಿವ ಸಂಪುಟದ ಸಭೆಯ ತೀರ್ಮಾನಗಳನ್ನು ಪತ್ರಕರ್ತರೊಂದಿಗೆ ವಿವರಿಸುತ್ತಿದ್ದ ಸಂದರ್ಭದಲ್ಲಿ ಅವರು ಈ ರೀತಿ ಸರಿತಾರ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. ಸರಿತಾರಿಗೆ ಯಾವುದೇ ಸೌಕರ್ಯ ಮಾಡಿಕೊಟ್ಟಿಲ್ಲ ಎಂದೂ ಅವರು ಸ್ಪಷ್ಟೀಕರಿಸಿದ್ದಾರೆ. ಅದೇವೇಳೆ ವಿದ್ಯುತ್ ಸಚಿವ ಆರ್ಯಾಡನ್ ಮುಹಮ್ಮದೆ ಸರಿತಾ ತನಗೆ ಹಣ ನೀಡಿದ್ದಾರೆ ಎಂದಿರುವುದನ್ನೂ ನಿರಾಕರಿಸಿದ್ದಾರೆ. ತನಗೂ ಸರಿತಾರಿಗೂ ಯಾವ ಸಂಬಂಧವೂ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.







