ಜೈಪುರ: ಸರಕಾರಿ ಅಧಿಕಾರಿಯ ಬಟ್ಟೆ ಬಿಚ್ಚಿಸುವೆ ಎಂದ ಶಾಸಕ!

ಜೈಪುರ: ರಾಜಸ್ಥಾನದ ಬೂಂದಿಯಲ್ಲಿ ಬಿಜೆಪಿಯ ಶಾಸಕ ಅಶೋಕ್ ಡೋಗ್ರ ವಿದ್ಯುತ್ ವಿಭಾಗದ ಎಂಜಿನಿಯರ್‌ವೊಬ್ಬರಿಗೆ ಬೆದರಿಕೆ ಹಾಕುತ್ತಿರುವ ಆಡಿಯೋ ಬಹಿರಂಗೊಂಡಿದ್ದು ಕೋಲಾಹಲಕ್ಕೆ ಕಾರಣವಾಗಿದೆ. ಆಡಿಯೊ ಟೇಪ್‌ನಲ್ಲಿ ಡೊಗ್ರಾ ವಿದ್ಯುತ್ ವಿಭಾಗದ ಎಂಜಿನಿಯರ್ ಗೋಪಾಲ್‌ಕೃಷ್ಣ ಯಾದವ್‌ರಿಗೆ ಬೈದು ಬೆದರಿಕೆ ಹಾಕುತ್ತಿರುವ ಧ್ವನಿ ಮುದ್ರಿತವಾಗಿದೆ
ನಗರದ ನೈನವಾ ರಸ್ತೆ ಪಕ್ಕದ ಜನತಾ ಕಾಲನಿಯಲ್ಲಿ ವಿದ್ಯುತ್ ವಿಭಾಗವು ನಿಯಮಬಾಹಿರವಾಗಿ ವಿದ್ಯುತ್ ಸಂಪರ್ಕ ತೆಗೆದುಕೊಂಡಿದ್ದ ಮನೆಗಳ ವಿದ್ಯುತ್ ಸಂಪರ್ಕವನ್ನು ಕಡಿದು ಹಾಕಿತ್ತು. ತದನಂತರ ಇಲ್ಲಿನ ನಿವಾಸಿಗಳು ಶಾಸಕರ ಬಳಿಗೆ ತೆರಳಿ ವಿದ್ಯುತ್ ಇಲಾಖೆಯ ವಿರುದ್ಧ ದೂರು ನೀಡಿದ್ದರು. ಇದರಿಂದ ಕೋಪಗೊಂಡ ಶಾಸಕರು ಫೋನ್ ಮೂಲಕ ಎಂಜಿನಿಯರ್‌ರನ್ನು ಸಂಪರ್ಕಿಸಿ ಕೆಟ್ಟದಾಗಿ ಬೈದು ಬಟ್ಟೆ ಕಳಚಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ರಾಜಸ್ಥಾನದ ಬಿಜೆಪಿಯ ಅಧ್ಯಕ್ಷ ಅಶೋಕ್ ಪರ್‌ನಾಮಿಯವರು ಬೂಂದಿಯ ಶಾಸಕರ ಈ ಅಹಿತಕರ ವರ್ತನೆಯ ಕುರಿತು ಪ್ರತಿಕ್ರಿಯಿಸಿದ್ದು ಅಗತ್ಯವೆಂದಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದ್ದಾರೆ. ಜೈಪುರದ ಜಾಮ್‌ಡೋಲಿಯಲ್ಲಿ ಜಲಸ್ವಾವಲಂಬನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪರ್‌ನಾಮಿಯವರು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಶಾಸಕ ಡೋಗ್ರಾ ಸರಕಾರಿ ಅಧಿಕಾರಿಯ ಜೊತೆ ಕೆಟ್ಟದಾಗಿ ವರ್ತಿಸಿರುವ ಪ್ರಕರಣವನ್ನು ಪಕ್ಷವು ಗಮನಿಸಿದೆ. ಶಾಸಕರ ಕೆಟ್ಟ ವರ್ತನೆಯ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.





