ಭಾರತದ ಶೂಟರ್ ಹೀನಾ ಸಿಧು ಒಲಿಂಪಿಕ್ಸ್‌ಗೆ ಅರ್ಹತೆ

ಹೊಸದಿಲ್ಲಿ, ಜ.27: ಭಾರತದ ಪಿಸ್ತೂಲ್ ಶೂಟರ್ ಹೀನಾ ಸಿಧು ಮುಂಬರುವ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಬುಧವಾರ ನಡೆದ ಏಷ್ಯನ್ ಒಲಿಂಪಿಕ್ಸ್ ಶೂಟಿಂಗ್ ಅರ್ಹತಾ ಸುತ್ತಿನಲ್ಲಿ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಗುರಿ ಇಟ್ಟಿರುವ ಹೀನಾ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಭಾಗವಹಿಸುವ ಕನಸನ್ನು ನನಸು ಮಾಡಿಕೊಂಡರು.
ಅರ್ಹತಾ ಸುತ್ತಿನಲ್ಲಿ 387 ಅಂಕವನ್ನು ಗಳಿಸಿ ಅಗ್ರ ಸ್ಥಾನ ಗಳಿಸಿದ್ದ ಹೀನಾ ಫೈನಲ್‌ನಲ್ಲಿ ಭಾಗವಹಿಸಿ 199.4 ಅಂಕ ಗಳಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಈ ಮೂಲಕ ಒಲಿಂಪಿಕ್ಸ್‌ನಲ್ಲೂ ಸ್ಥಾನ ದೃಢಪಡಿಸಿದ್ದಾರೆ.
ಫೈನಲ್‌ನಲ್ಲಿ ಸ್ಪರ್ಧಿಸಿದ್ದ 8 ಶೂಟರ್‌ಗಳ ಪೈಕಿ ನಾಲ್ಕು ಮಂದಿ ಈಗಾಗಲೇ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಒಲಿಂಪಿಕ್ಸ್‌ನಲ್ಲಿ ಖಾಲಿ ಉಳಿದಿದ್ದ ಎರಡು ಸ್ಥಾನಗಳಿಗೆ ಹೀನಾ ಅವರು ಇರಾನ್‌ನ ಇಬ್ಬರು ಶೂಟರ್‌ಗಳು ಹಾಗೂ ಸಿಂಗಾಪುರದ ಓರ್ವ ಶೂಟರ್‌ರಿಂದ ಸ್ಪರ್ಧೆ ಎದುರಿಸುತ್ತಿದ್ದರು. ಇವರೆಲ್ಲರೂ ಫೈನಲ್ ಸುತ್ತಿಗೇರಲು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಹೀನಾ ಹಾದಿ ಸುಗಮವಾಗಿತ್ತು.
ಚೈನೀಸ್ ತೈಪೆಯ ಟಿಯೆನ್ ಚಿಯಾ ಚೆನ್ 198.1 ಅಂಕ ಗಳಿಸಿ ಬೆಳ್ಳಿ ಪದಕವನ್ನೂ, ಕೊರಿಯದ ಜಿಮ್ ಯೂನ್ ಮಿ(177.9) ಕಂಚಿನ ಪದಕವನ್ನು ಜಯಿಸಿದ್ದಾರೆ. ಈ ಇಬ್ಬರು ಆಟಗಾರ್ತಿಯರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.
‘‘ಕೊನೆಗೂ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ನಾನು ಈ ಹಿಂದೆ ಹಲವು ಬಾರಿ ಅರ್ಹತೆ ಪಡೆಯುವುದರಿಂದ ವಂಚಿತಳಾಗಿದ್ದೆ. ಇದೀಗ ತಾನು ತುಂಬಾ ನಿರಾಳವಾಗಿದ್ದೇನೆ’’ ಎಂದು ವಿಶ್ವದ ಮಾಜಿ ನಂ.1 ಆಟಗಾರ್ತಿ ಹೀನಾ ಪ್ರತಿಕ್ರಿಯಿಸಿದ್ದಾರೆ.





