ಬೆಂಗಳೂರು :ಐಎಸಿಸಿ ಸಮಾವೇಶ - ಭಾರತ-ಅಮೆರಿಕ 500 ಬಿಲಿಯನ್ ಡಾಲರ್ ವಹಿವಾಟು
ಐಎಸಿಸಿ ಬೆಂಗಳೂರು ಸಮಾವೇಶದಲ್ಲಿ ರೂಪರೇಷೆ
ಬೆಂಗಳೂರು, ಜ. 27: ಇಂಡೊ ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ (ಐಎಸಿಸಿ) ಅಮೆರಿಕ ಮತ್ತು ಭಾರತದ ಮಧ್ಯಮ ಗಾತ್ರದ ಕಂಪೆನಿಗಳು ಪರಸ್ಪರ ಪಾಲುದಾರಿಕೆ ಹೊಂದಬೇಕೆಂದು ಸಲಹೆ ಮಾಡಿದ್ದು, ಇದು ಎರಡು ದಿಕ್ಕಿನಲ್ಲಿ ಉದ್ಯಮ ವಹಿವಾಟು ಮತ್ತು ಹೂಡಿಕೆಗೆ ಪೂರಕವಾಗಲಿದೆ ಎಂದು ಹೇಳಿದೆ.
‘ಮುಂದಿನ ಹಂತದ ಭಾರತ-ಅಮೆರಿಕ ಆರ್ಥಿಕ ವಹಿವಾಟು ಎರಡು ರಾಷ್ಟ್ರಗಳ ಮಧ್ಯಮ, ಸಣ್ಣ ಗಾತ್ರದ ಕಂಪೆನಿಗಳ ಸಹಕಾರವನ್ನು ಆಧರಿಸಿದೆ. ಈ ಉದ್ಯಮಗಳು ವಿವಿಧ ಕ್ಷೇತ್ರಗಳಲ್ಲಿ ಒಟ್ಟಾಗಿ ಬಂದರೆ ಅತ್ಯುತ್ತಮ ಅವಕಾಶಗಳಿವೆ. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಇದು ಸಕಾಲವಾಗಿದೆ’ ಎಂದು ಐಎಸಿಸಿ ರಾಷ್ಟ್ರೀಯ ಅಧ್ಯಕ್ಷ ಡಾ.ಲಲಿತ್ ಕನೋಡಿಯಾ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಮಾತನಾಡಿದ ಅವರು, ಈ ಅವಕಾಶಗಳನ್ನು ಬಳಸಿಕೊಂಡು ಕ್ರಿಯಾ ಯೋಜನೆ ರೂಪಿಸಲು ಐಎಸಿಸಿಯು ಉಭಯ ರಾಷ್ಟ್ರಗಳ ನೀತಿ ನಿರೂಪಕರು, ಉದ್ಯಮದ ಪ್ರಮುಖರ ನಡುವೆ ಪರಸ್ಪರ ಸಂವಹನ ಕಾರ್ಯಕ್ರಮ ಆಯೋಜಿಸುತ್ತಿದೆ. ದಿಲ್ಲಿ ಮತ್ತು ಮುಂಬೈನಲ್ಲಿ ಇತ್ತೀಚಿನ ದಿನಗಳಲ್ಲಿ ಇಂಥ ಸಂವಹನ ಕಾರ್ಯಕ್ರಮಗಳನ್ನು ಆಯೋಜಿಸಿದ ಬಳಿಕ ಐಎಸಿಸಿ ಈಗ ಬೆಂಗಳೂರಿನಲ್ಲಿ ಜ.29ರಂದು ಮುಂದಿನ ಹಂತದ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಈ ಸಮಾವೇಶದ ಮುಖ್ಯ ಉದ್ದೇಶ ಉಭಯ ರಾಷ್ಟ್ರಗಳ ಉದ್ಯಮ ಪ್ರಮುಖರು, ನೀತಿ ನಿರೂಪಕರ ನಡುವೆ ಪರಸ್ಪರ ಚರ್ಚೆಗೆ ವೇದಿಕೆ ಕಲ್ಪಿಸುವುದು. ಈ ಮೂಲಕ ಭಾರತ-ಅಮೆರಿಕ ನಡುವೆ 500 ಬಿಲಿಯನ್ ಡಾಲರ್ ವಹಿವಾಟು ನಡೆಸಲು ಸಾಧ್ಯತೆಗಳನ್ನು ಗುರುತಿಸುವುದು ಎಂದರು.
ಹಿಂದಿನ ಚರ್ಚೆಯಲ್ಲಿ ಆಗಿರುವ ತೀರ್ಮಾನಗಳನ್ನು ಪರಾಮರ್ಶಿಸಿ, ಹೂಡಿಕೆಗೆ ಇರುವ ಅವಕಾಶಗಳನ್ನು ವಿಸ್ತರಿಸಲಾಗುವುದು. ಉಭಯತ್ರರಿಗೂ ಅನುಕೂಲ ಆಗುವಂತಹ ವಾತಾವರಣ ರೂಪಿಸುವ ಉದ್ದೇಶವೂ ಇದೆ. ಐಎಸಿಸಿ ಸಂಸ್ಥೆಯು ಭಾರತ ಮತ್ತು ಅಮೆರಿಕ ನಡುವಣ ವಿಶೇಷ ಉದ್ಯಮ ವೇದಿಕೆಯಾಗಿದ್ದು, ಉಭಯ ರಾಷ್ಟ್ರಗಳ ನಡುವೆ ಹೂಡಿಕೆಯ ಸಾಧ್ಯತೆಗಳನ್ನು ವಿಸ್ತರಿಸಲಿದೆ ಎಂದು ಡಾ.ಕನೋಡಿಯಾ ಹೇಳಿದರು.
ಬೆಂಗಳೂರು ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ರಾಜ್ಯದಲ್ಲಿ ಹೂಡಿಕೆಗೆ ಇರುವ ವಿವಿಧ ಸಾಧ್ಯತೆಗಳು, ಅವಕಾಶಗಳು, ಪ್ರೋತ್ಸಾಹ ಕ್ರಮಗಳ ಬಗೆಗೆ ವಿವರಿಸಲಿದ್ದಾರೆ. ಅಲ್ಲದೆ, ಫೆ.3ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ‘ಇನ್‌ವೆಸ್ಟ್-ಕರ್ನಾಟಕ’ ಕುರಿತು ಮಾಹಿತಿ ನೀಡಲಿದ್ದಾರೆ ಎಂದರು.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಮುಖ್ಯ ಭಾಷಣ ಮಾಡಲಿದ್ದು, ಆರೋಗ್ಯ, ಔಷಧ ಮತ್ತು ಜೀವ ವಿಜ್ಞಾನ ಕುರಿತ ಗೋಷ್ಟಿಯಲ್ಲಿ ಮಾತನಾಡಲಿದ್ದಾರೆ. ಈ ವಲಯದಲ್ಲಿ ಅಮೆರಿಕದ ಹೂಡಿಕೆಗೆ ಇರುವ ಅವಕಾಶಗಳನ್ನು ವಿವರಿಸಲಿದ್ದಾರೆ.
ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ರಾಜ್ಯದಲ್ಲಿ ಆರ್ಥಿಕ ಮತ್ತು ಉದ್ದಿಮೆ ಬೆಳವಣಿಗೆಗೆ ಇರುವ ಅವಕಾಶಗಳನ್ನು ವಿವರಿಸುವರು. ಇನ್ಫೋಸಿಸ್ ಟೆಕ್ನಾಲಾಜಿಸ್ ಲಿ.ನ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ
ಐಎಸಿಸಿಯ ಮುಖ್ಯ ಕಾರ್ಯಕ್ರಮವಾಗಿರುವ ಈ ಸಮಾವೇಶದಲ್ಲಿ ಮೇಕ್ ಇನ್ ಇಂಡಿಯಾ, ಆರೋಗ್ಯ ಮತ್ತು ಔಷಧ ಕ್ಷೇತ್ರ, ವಿಮಾನಯಾನ ಮತ್ತು ರಕ್ಷಣೆ, ಇ- ಕಾಮರ್ಸ್, ಸ್ಮಾರ್ಟ್ ಸಿಟಿ ಕುರಿತ ಕ್ಷೇತ್ರಗಳ ಬಗೆಗೆ ಗೋಷ್ಠಿಗಳು ನಡೆಯಲಿದ್ದು, ಉಭಯ ರಾಷ್ಟ್ರಗಳು ಹೂಡಿಕೆಯ ಬಗೆಗೆ ಇರುವ ಅವಕಾಶಗಳು ಈ ಮೂಲಕ 500 ಬಿಲಿಯನ್ ಡಾಲರ್ ವಹಿವಾಟು ವಿಸ್ತರಿಸುವುದರ ಬಗ್ಗೆೆ ಚರ್ಚಿಸಲಿದ್ದಾರೆ ಎಂದು ತಿಳಿಸಲಾಗಿದೆ.





