ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಹೊಸದಿಲ್ಲಿ,ಜ.27: ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗಿರುವ ಬಗ್ಗೆ ಕಠಿಣ ನಿಲುವನ್ನು ತಳೆದಿರುವ ಸವೋಚ್ಚ ನ್ಯಾಯಾಲಯವು ಬುಧವಾರ ಕೇಂದ್ರ ಸರಕಾರಕ್ಕೆ ನೋಟಿಸ್‌ನ್ನು ಹೊರಡಿಸಿತಲ್ಲದೆ, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ ರಾಜ್ಯಪಾಲರ ವರದಿಯನ್ನು 15 ನಿಮಿಷಗಳಲ್ಲಿ ತನಗೆ ಸಲ್ಲಿಸುವಂತೆ ರಾಜ್ಯಪಾಲರ ಪರ ವಕೀಲರಿಗೆ ಸೂಚಿಸಿತು. ಮುಂದಿನ ವಿಚಾರಣೆೆಯನ್ನು ಅದು ಫೆ.1ಕ್ಕೆ ನಿಗದಿಗೊಳಿಸಿತು.
ಈ ವಿಷಯದಲ್ಲಿ ಅಟಾರ್ನಿ ಜನರಲ್‌ರ ನೆರವನ್ನು ಬಯಸಿದ ಸರ್ವೋಚ್ಚ ನ್ಯಾಯಾಲಯವು, ರಾಷ್ಟ್ರಪತಿ ಆಡಳಿತವನ್ನು ಏಕೆ ಹೇರಲಾಗಿದೆ ಎಂಬ ಬಗ್ಗೆ ಅಟಾರ್ನಿ ಜನರಲ್‌ರ ಅಭಿಪ್ರಾಯವನ್ನು ತಾನು ತಿಳಿದುಕೊಳ್ಳಲು ಬಯಸಿರುವುದಾಗಿ ಸರಕಾರಕ್ಕೆ ತಿಳಿಸಿತು.
ರಾಷ್ಟ್ರಪತಿ ಆಡಳಿತ ಹೇರಿಕೆಯ ಕುರಿತು ಆಘಾತ ವ್ಯಕ್ತಪಡಿಸಿದ್ದ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ನಬಂ ಟುಕಿ ಅವರು, ಇದು ಜನರನ್ನು ನಿರಾಶೆಗೊಳಿಸಿದೆ. ನಾವು ಈ ವಿಷಯವನ್ನು ನ್ಯಾಯಾಲಯಕ್ಕೊಯ್ಯುತ್ತೇವೆ ಮತ್ತು ಸರ್ವೋಚ್ಚ ನ್ಯಾಯಾಲಯದಿಂದ ನ್ಯಾಯವನ್ನು ಕೇಳುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿದ್ದರೂ ಕಡಿಮೆ ಸಂಖ್ಯೆಯ ಶಾಸಕರನ್ನು ಹೊಂದಿರುವ ಪಕ್ಷವೇಕೆ ನಮ್ಮ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ? ಈಗ ನ್ಯಾಯಾಲಯವೇ ನಿರ್ಧರಿಸಬೇಕು ಎಂದು ಹೇಳಿದ್ದರು.
ರಾಷ್ಟ್ರಪತಿ ಆಡಳಿತ ಹೇರಿಕೆ ಕ್ರಮವನ್ನು ಪ್ರಜಾಪ್ರಭುತ್ವದ ಕೊಲೆ ಎಂದು ಕಾಂಗ್ರೆಸ್ ಬಣ್ಣಿಸಿತ್ತು. ಕಾಂಗ್ರೆಸ್ ಆರೋಪಗಳನ್ನು ತಳ್ಳಿ ಹಾಕಿದ್ದ ಬಿಜೆಪಿ, ಕಾಂಗ್ರೆಸ್ ಸರಕಾರವು ಭಾರತದಲ್ಲಿ ತುರ್ತು ಸ್ಥಿತಿಯನ್ನು ಹೇರಿದ್ದಾಗ ಪ್ರಜಾಪ್ರಭುತ್ವದ ಕೊಲೆ ನಡೆದಿತ್ತು. ಅರುಣಾಚಲ ಪ್ರದೇಶದಲ್ಲಿ ನಡೆದಿರುವುದು ನಮ್ಮ ಸಂವಿಧಾನಕ್ಕೆ ಅನುಗುಣವಾಗಿದೆ ಎಂದು ಹೇಳಿತ್ತು.





