ಮುಲ್ಕಿ: ರಾಷ್ಟ್ರ ಮಟ್ಟದ ಜಲ ಸಾಹಸ ಶಿಬಿರಕ್ಕೆ ಚಾಲನೆ
ಪ್ರಮಾಣೀಕೃತ ಸಮುದ್ರ ಜೀವ ರಕ್ಷಕ ತರಬೇತಿಗೆ ಸಿಂಧ್ಯಾ ಕರೆ
ಮಂಗಳೂರು, ಜ.27: ಸಮುದ್ರದಲ್ಲಿ ಜೀವಾಪಯದಲ್ಲಿರುವವರಿಗ ರಕ್ಷಣೆ ನೀಡಲು ಜೀವ ರಕ್ಷಕಕರನ್ನು ತರಬೇತುಗೊಳಿಸುವ ಕಾರ್ಯ ದ.ಕ. ಜಿಲ್ಲೆಯಲ್ಲಿ ನಡೆಸಬೇಕು ಎಂದು ರಾಜ್ಯದ ಮಾಜಿ ಸಚಿವ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಕರೆ ನೀಡಿದ್ದಾರೆ. ಅವರು ಇಂದು ಮುಲ್ಕಿಯ ಬಪ್ಪನಾಡು ಗ್ರಾಮದ ಕೊಳಚಿಕಂಬಳ ಬಳಿಯ ಸಮುದ್ರ ಮತ್ತು ಶಾಂಭವಿ ನದಿ ಸಮೀಪದ ಮಂತ್ರ ಸರ್ಫ್ ಕ್ಲಬ್‌ನ ಐ.ಎ. ಕೈರನ್ನ ವೇದಿಕೆಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್‌ನ ಹಿರಿಯ ವಿದ್ಯಾರ್ಥಿಗಳ ವಿಭಾಗವಾಗಿರುವ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿರುವ ಐದು ದಿನಗಳ ರಾಷ್ಟ್ರ ಮಟ್ಟದ ಜಲಸಾಹಸ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಹಲವಾರು ಸ್ವಿಮ್ಮಿಂಗ್ ಫೂಲ್‌ಗಳು ಹಾಗೂ ಸಮುದ್ರ ಕಿನಾರೆಯನ್ನು ಹೊಂದಿರುವ ದ.ಕ. ಜಿಲ್ಲೆಯಲ್ಲಿ ಜೀವ ರಕ್ಷಕರಿಗೆ ತರಬೇತಿ ನೀಡುವ ಮೂಲಭೂತ ಸೌಲಭ್ಯಗಳು ಕೂಡಾ ವಿಫುಲವಾಗಿದೆ. ಕನಿಷ್ಠ 2000ದಷ್ಟು ಪ್ರಮಾಣೀಕೃತ ಜೀವರಕ್ಷಕರನ್ನು ತಯಾರುಗೊಳಿಸುವ ಕಾರ್ಯ ಜಿಲ್ಲೆಯಲ್ಲಿ ನಡೆಯಬೇಕಿದೆ. ಈ ಬಗ್ಗೆ ಯುವಜನ ಸೇವಾ ಇಲಾಖೆ ಹಾಗೂ ಪೊಲೀಸ್ ಇಲಾಖೆ ಮುತುವರ್ಜಿ ವಹಿಸಬೇಕು ಎಂದರು. ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳಲ್ಲಿ ಪ್ರಕೃತಿ ಪ್ರೇಮ, ಸೇವಾ ಮನೋಭಾವ, ಸಹಬಾಳ್ವೆಯ ಜೀವನ ಪದ್ಧತಿಯನ್ನು ಕಲಿಸಿಕೊಡುವ ಸಂಸ್ಥೆ ಸ್ಕೌಟ್ಸ್ ಮತ್ತು ಗೈಡ್ಸ್. ರಾಜ್ಯದಲ್ಲಿ 3.5 ಲಕ್ಷ ಮಂದಿ ಸಂಸ್ಥೆಯ ಸದಸ್ಯರಾಗಿದ್ದು, ಇವರು ಗಾಂಧೀಜಿಯವರ ಸ್ವಚ್ಛ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಸಹಕರಿಸುತ್ತಿರುವುದಲ್ಲದೆ, ಪ್ರವಾಹಗಳ ಸಂದರ್ಭ ಜೀವ ರಕ್ಷಕರಾಗಿ, ಸಂತ್ರಸ್ತರಿಗೆ ನೆರವು ನೀಡುವ ಸೇವಾ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇತ್ತೀಚೆಗೆ ಚೆನ್ನೈನಲ್ಲಿ ಸಂಭವಿಸಿದ ಜಲ ಪ್ರವಾಹ, ಲಾತೋರ್, ನೇಪಾಳ ಮೊದಲಾದ ಕಡೆ ನಡೆದ ಜಲ ಪ್ರವಾಹದ ಸಂದರ್ಭದಲ್ಲಿಯೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸ್ಥಳಗಳಿಗೆ ಭೇಟಿ ನೀಡಿ ಸೇವಾ ಕಾರ್ಯ ನಡೆಸಿದ್ದಾರೆ ಎಂದವರು ಈ ಸಂದರ್ಭ ಹೇಳಿದರು. ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ದ.ಕ.ಜಿಲ್ಲಾ ಮುಖ್ಯ ಆಯುಕ್ತ ಎನ್.ಜಿ. ಮೋಹನ್ ಜಾಗತಿಕ ಬಂಟ ಸಂಘಗಳ ಒಕ್ಕೂಟದ ಉಪಾಧ್ಯಕ, ಐಕಳ ಹರೀಶ್ ಶೆಟ್ಟಿ, ಸಿಂಡಿಕೇಟ್ ಬ್ಯಾಂಕ್ ಮಣಿಪಾಲದ ಕ್ಷೇತ್ರೀಯ ಜನರಲ್ ಮ್ಯಾನೇಜರ್ ಐಕಳ ಹರೀಶ್ ಶೆಟ್ಟಿ, ಮಂಗಳೂರು ಲಯನ್ಸ್ ಜಿಲ್ಲಾ ಗವರ್ನರ್ ಕವಿತಾ ಶಾಸ್ತ್ರಿ, ಸ್ಕೌಟ್ಸ್ ಗೈಡ್ಸ್ ಸ್ವಾಗತ ಸಮಿತಿಯ ಸಮಿತಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಉದ್ಯಮಿ ಧನಂಜಯ ಶೆಟ್ಟಿ, ಐರಿನ್ ಡಿಕುನ್ನಾ ಹಾಗೂ ಇತರರು ಉಪಸ್ಥಿತರಿದ್ದರು. ಸರ್ಫ್ ಕ್ಲಬ್ ಬಗ್ಗೆ ರಾಮ್ ಮೋಹನ್ ಮಾಹಿತಿ ನೀಡಿದರು. ಅನಿಲೇಂದ್ರ ಶರ್ಮಾ ಸ್ಕೌಟ್ಸ್ ಗೈಡ್ಸ್ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಲ್ಕಿಯ ಅಧ್ಯಕ್ಷ ಸರ್ವೋತ್ತಮ ಅಂಚನ್ ಸ್ವಾಗತಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆ, ಮಂತ್ರ ಸರ್ಫ್ ಕ್ಲಬ್‌ಗಳ ಸಹಭಾಗಿತ್ವದಲ್ಲಿ ಇಂದಿನಿಂದ ಜ. 31ರವರೆಗೆ ಈ ಜಲ ಸಾಹಸ ಶಿಬಿರ ನಡೆಯಲಿದೆ.
2 ಕೋಟಿ ರೂ.ಗಳಲ್ಲಿ ಮುಲ್ಕಿಯಲ್ಲಿ ವಿಶೇಷ ಸರ್ಫಿಂಗ್ ಕೇಂದ್ರ: ಸಚಿವ ಅಭಯ
2016-17ನೆ ಸಾಲಿನ ಬಜೆಟ್‌ನಲ್ಲಿ ಸುಮಾರು 2 ಕೋಟಿ ರೂ.ಗಳ ಅನುದಾನವನ್ನು ಮೀಸಲಿಡುವುದರೊಂದಿಗೆ ಈಗಾಗಲೇ ಸರ್ಫಿಂಗ್‌ನಲ್ಲಿ ಹೆಸರುವಾಸಿಯಾಗಿರುವ ಮುಲ್ಕಿಯನ್ನು ವಿಶೇಷ ಸರ್ಫಿಂಗ್ ಕೇಂದ್ರವ್ನನಾಗಿ ಪರಿವರ್ತಿಸಲಾಗುವುದು ಎಂದು ರಾಜ್ಯದ ಯುವಜನ ಸಬಲೀಕರಣ ಮತ್ತು ಮೀನುಗಾರಿಕಾ ಇಲಾಖೆಯ ಸಚಿವ ಅಭಯಚಂದ್ರ ಜೈನ್ ಪ್ರಕಟಿಸಿದರು. ರಾಷ್ಟ್ರ ಮಟ್ಟದ ಜಲ ಸಾಹಸ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮೂಡಬಿದ್ರೆಯಲ್ಲಿ ಈಗಾಗಲೇ ಸಿಂಥೆಟಿಕ್‌ಟ್ರಾಕ್, ಜಿಮ್, ಸ್ವಿಮ್ಮಿಂಗ್ ಫೂಲ್ ವ್ಯವಸ್ಥೆಯೊಂದಿಗೆ ಸುಮಾರು 10 ಕೋಟಿ ರೂ.ಗಳಲ್ಲಿ ಕ್ರೀಡಾಕೇಂದ್ರವಾಗಿ ಪರಿವರ್ತಿಸಲಾಗಿದ್ದರೆ, ಮುಲ್ಕಿ ಕ್ಷೇತ್ರದಲ್ಲಿ ಸರ್ಫಿಂಗ್ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ಮಾಡಲಾಗುವುದು ಎಂದು ಅವರು ಹೇಳಿದರು.







