ಕೋಲಾರ: ಸ್ಮಶಾನದಲ್ಲೇ ಮಾಂಸಾಹಾರ ಸೇವನೆ

ಮೂಢನಂಬಿಕೆ ವಿರುದ್ಧ ಜನ ಜಾಗೃತಿ
ಕೋಲಾರ ಜ.27: ಮೂಢ ನಂಬಿಕೆಗಳನ್ನು ವಿರೋಧಿಸಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಮತ್ತು ಮುಖಂಡರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಸ್ಮಶಾನದಲ್ಲೇ ಮಾಂಸದ ಅಡುಗೆ ಮಾಡಿ, ಸೇವಿಸಿ ಇಡೀ ರಾತ್ರಿ ಕಳೆದ ಘಟನೆ ತಾಲೂಕಿನ ಮಾರ್ಜೇನಹಳ್ಳಿ ಗ್ರಾಮದಲ್ಲಿ ಜರಗಿದೆ.
ನೆ ಸಂವಿಧಾನ ಸಮರ್ಪಣಾ ದಿನಾಚರಣೆಯ ಅಂಗವಾಗಿ ಮಂಗಳ ವಾರ ರಾತ್ರಿ ಮಾರ್ಜೇನಹಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮೂಢ ನಂಬಿಕೆ ಹಾಗೂ ಮೌಡ್ಯಾಚರಣೆ ವಿರುದ್ಧ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮೂಢನಂಬಿಕೆಗಳ ವಿರುದ್ಧ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆ ಈ ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತಿತ್ತು, ಕೋಲಾರ ಜಿಲ್ಲೆಯಲ್ಲಿ ಇದೇ ಪ್ರಥಮಬಾರಿಗೆ ಇಂತಹ ಪ್ರಯತ್ನವನ್ನು ಮಾರ್ಜೇನಹಳ್ಳಿ ಯುವಕ ಸಂಘ ಮಾಡಿ ಗಮನ ಸೆಳೆದಿದೆ.
ಸ್ಮಶಾನದಲ್ಲಿ ಸೇರಿದ ಜನರು ಅಲ್ಲೇ ಕೋಳಿ ಕೊಯ್ದು, ಅಡುಗೆ ಮಾಡಿ ಗೋರಿಗಳ ಮದ್ಯೆ ಕುಳಿತು ಊಟ ಮಾಡಿದರು. ಇಡೀ ರಾತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಪ್ರಕೃತಿ ಕಲಾ ತಂಡದಿಂದ ಜಾನಪದ ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಿಸರ್ಗ ಕಲಾತಂಡದ ಡಾ.ಚಂದ್ರಶೇಖರ್ ಕಂಬಾರರು ರಚಿಸಿದ ಬೆಪ್ಪತಕ್ಕಡಿ ಬೋಳೆಶಂಕರ ಎಂಬ ಮೂಢನಂಬಿಕೆಗಳ ಕುರಿತ ಜಾಗೃತಿ ನಾಟಕಗಳನ್ನು ಪ್ರದರ್ಶಿಸಲಾಯಿತು.
ದೀಪಾಲಂಕಾರಗಳಿಂದ ಮೌನ ಸ್ಮಶಾನವು ಹಬ್ಬದ ಹಾಗೂ ಸಡಗರದ ವಾತಾವರಣವನ್ನು ನಿರ್ಮಿಸಿತ್ತು. ಇದೇ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಭಯ-ಭೀತಿ ಇಲ್ಲದೆ ಇದೊಂದು ಮೂಢನಂಬಿಕೆ ಎಂದು ನಿರೂಪಿಸಿದರು.ಾರ್ಯಕ್ರಮದಲ್ಲಿ ಮಾರ್ಜೇನಹಳ್ಳಿ ಗ್ರಾಪಂ ಅಧ್ಯಕ್ಷೆ ಎಸ್.ವಿ. ಉಮಾದೇವಿ, ದಲಿತ ಮುಖಂಡ ವಕ್ಕಲೇರಿ ರಾಜಪ್ಪ, ಟಿಪ್ಪು ಸೆಕ್ಯುಲರ್ ಸೇನೆ ರಾಜಾಧ್ಯಕ್ಷ ಆಸಿಫ್‌ವುಲ್ಲಾ, ವರದೇನಹಳ್ಳಿ ವೆಂಕಟೇಶ್, ದಲಿತ ಸೇನೆ ರಾಜ್ಯಾಧ್ಯಕ್ಷ ದಲಿತ್ ನಾರಾಯಣಸ್ವಾಮಿ, ವಾಲ್ಮೀಕಿ ಸಂಘದ ಪ್ರಧಾನ ಕಾರ್ಯದರ್ಶಿ ಅಂಬರೀಶ್, , ಗುತ್ತಿಗೆದಾರ ವಿ. ಬಾಬು, ಗ್ರಾಪಂ ಸದಸ್ಯ ರವೀಂದ್ರ, ಕಲಾವಿದ ಆರ್.ಮುನಿಸ್ವಾಮಿ, ಮೂರಂಡಹಳ್ಳಿ ರೆಡ್ಡೆಪ್ಪ, ಎನ್. ನಾರಾಯಣಸ್ವಾಮಿ, ಮಂಜುಳಗೋಪಾಲ್, ಶಿಕ್ಷಕ ಎಲ್. ಮುನಿಯಪ್ಪ, ಪಿ.ಕೆ. ನಾಗರಾಜ್, ಶಶಿಧರ್, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸೌಮ್ಯಾ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.







