ಟ್ರಂಪ್‌ನಿಂದ ಭಾರತದ ಗುಣಗಾನ
ವಾಶಿಂಗ್ಟನ್, ಜ.27: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಯಾದ ಡೊನಾಲ್ಡ್ ಟ್ರಂಪ್, ಸ್ಪರ್ಧಾಕಣಕ್ಕಿಳಿದ ಬಳಿಕ ಇದೇ ಮೊದಲ ಬಾರಿಗೆ ಭಾರತದ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾರತವು ಪ್ರಗತಿಯತ್ತ ಸಾಗುತ್ತಿದೆಯಾದರೂ, ಯಾರೂ ಕೂಡಾ ಆ ಬಗ್ಗೆ ಮಾತನಾಡುತ್ತಿಲ್ಲವೆಂದು ಅವರು ಹೇಳಿದ್ದಾರೆ.
ಸಿಎನ್‌ಎನ್ ಸುದ್ದಿವಾಹಿನಿಗೆ ಮಂಗಳವಾರ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅವರು, ಭಾರತವು ಬಹಳ ಚೆನ್ನಾಗಿ ಮುಂದುವರಿಯುತ್ತಿದೆ ಎಂದು ಹೇಳಿದ್ದಾರೆ. ಟ್ರಂಪ್ ತನ್ನ ಹಿಂದಿನ ಅನೇಕ ಭಾಷಣಗಳಲ್ಲಿ ಚೀನಾ, ಮೆಕ್ಸಿಕೊ ಹಾಗೂ ಜಪಾನ್‌ನಂತಹ ದೇಶಗಳನ್ನು ಬಹಿರಂಗವಾಗಿ ಟೀಕಿಸಿದ್ದರು. ಆದರೆ ಈ ಬಾರಿ ತನ್ನ ಧಾಟಿಯನ್ನು ಬದಲಾಯಿಸಿರುವ ಅವರು, ಈ ರಾಷ್ಟ್ರಗಳ ಜೊತೆ ಭಾರತವನ್ನು ಕೂಡಾ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಇರಾನ್, ಚೀನಾ, ಭಾರತ, ಜಪಾನ್ ಇವೆಲ್ಲವೂ ಚೆನ್ನಾಗಿ ಮುಂದುವರಿಯುತ್ತವೆ. ಆದರೆ ನಮ್ಮ ದೇಶದ ಗತಿ ಏನಾಗಿದೆ ನೋಡಿ..ಜಗತ್ತಿನೆಲ್ಲೆಡೆಯಿಂದ ಗೌರವವನ್ನು ಪಡೆದುಕೊಳ್ಳುವಂತಹ ಅಗಾಧವಾದ ಶಕ್ತಿಯನ್ನು ಹೊಂದಿದ್ದ ನಾವು ಈಗ ನಗೆಪಾಟಲಿಗೀಡಾಗಿದ್ದೇವೆ ಎಂದರು. ಹಠಾತ್ತನೆ ಜನರು, ಭಾರತ ಹಾಗೂ ಚೀನಾ ಸಾಧಿಸಿರುವ ಆರ್ಥಿಕ ಪ್ರಗತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅಮೆರಿಕವು ಅಧಃಪತನದೆಡೆಗೆ ಸುದೀರ್ಘ ಪ್ರಯಾಣವನ್ನು ಬೆಳೆಸಿದೆ. ನಮಗೆ ಗೌರವ ದೊರೆಯುತ್ತಿಲ್ಲ. ಇದು ತುಂಬಾ ವಿಷಾದಕರ ಎಂದವರು ಖೇದ ವ್ಯಕ್ತಪಡಿಸಿದ್ದಾರೆ.





