ಆರೋಪಿಗಳ ಧ್ವನಿ ಸ್ಯಾಂಪಲ್ ಸಂಗ್ರಹಕ್ಕೆ ಪಾಕ್ ಕೋರ್ಟ್ ನಕಾರ
ಇಸ್ಲಾಮಾಬಾದ್,ಜ.27: ಮುಂಬೈ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಝಕಿವುರ್ರಹ್ಮಾನ್ ಲಖ್ವಿ ಹಾಗೂ ಇತರ ಆರು ಮಂದಿ ಶಂಕಿತ ಆರೋಪಿಗಳ ಧ್ವನಿ ಮಾದರಿಗಳನ್ನು ಸಂಗ್ರಹಿಸಲು ಅನುಮತಿ ನೀಡುವಂತೆ ಕೋರಿ ಪಾಕ್ ಸರಕಾರ ಸಲ್ಲಿಸಿದ ಅರ್ಜಿಯನ್ನು, ಇಸ್ಲಾಮಾಬಾದ್‌ನ ನ್ಯಾಯಾಲಯವೊಂದು ತಿರಸ್ಕರಿಸಿದೆ.ಮುಂಬೈ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಭಾರತೀಯ ಗುಪ್ತಚರ ಅಧಿಕಾರಿಗಳು ಕದ್ದಾಲಿಸಿರುವ ಫೋನ್‌ಸಂಭಾಷಣೆಯ ಮಾದರಿಗಳೊಂದಿಗೆ, ಝಕಿವುರ್ರಹ್ಮಾನ್ ಹಾಗೂ ಇತರ ಶಂಕಿತ ಆರೋಪಿಗಳ ಧ್ವನಿಯನ್ನು ಹೋಲಿಕೆ ಮಾಡಲು ಅವಕಾಶ ನೀಡುವಂತೆ ಕೋರಿ ಪ್ರಾಸಿಕ್ಯೂಶನ್ ಇಸ್ಲಾಮಾಬಾದ್‌ನ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿತ್ತು. ಈ ಏಳು ಮಂದಿ ಶಂಕಿತ ಆರೋಪಿಗಳು ಮುಂಬೈ ದಾಳಿಯಲ್ಲಿ ಶಾಮೀಲಾಗಿರುವುದಕ್ಕೆ ಪುರಾವೆಯಾಗಿ, ಧ್ವನಿಮುದ್ರಣದ ಮಾದರಿಗಳನ್ನು ಭಯೋತ್ಪಾದನಾ ನಿಗ್ರಹ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿಯನ್ನು ಅದು ಕೋರಿತ್ತು.
ಆದರೆ ಇಸ್ಲಾಮಾಬಾದ್ ನ್ಯಾಯಾಲಯ ಈ ಅರ್ಜಿಯನ್ನು ಸೋಮವಾರ ತಿರಸ್ಕರಿಸಿದೆ. ಆರೋಪಿಯ ಧ್ವನಿಯ ಸ್ಯಾಂಪಲ್‌ಗಳನ್ನು ಸಂಗ್ರಹಿಸಲು ಅನುಮತಿ ನೀಡುವಂತಹ ಕಾನೂನು ಪಾಕಿಸ್ತಾನದಲ್ಲಿ ಅಸ್ತಿತ್ವದಲ್ಲಿಲ್ಲವೆಂದು ಅದು ತನ್ನ ತೀರ್ಪಿನಲ್ಲಿ ತಿಳಿಸಿದೆ. 2011 ಹಾಗೂ 2015ರಲ್ಲಿಯೂ, ಲಖ್ವಿಯ ಧ್ವನಿಮುದ್ರಣದ ಮಾದರಿಗಳನ್ನು ಸಂಗ್ರಹಿಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು.
2008ರಲ್ಲಿ ನಡೆದ ಮುಂಬೈ ಭಯೋತ್ಪಾದಕ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿಗಳ ದೂರವಾಣಿ ಸಂಭಾಷಣೆಗಳನ್ನು ಭಾರತೀಯ ಬೇಹುಗಾರಿಕಾ ಸಂಸ್ಥೆಗಳು ಕದ್ದಾಲಿಸಿರುವುದಾಗಿ ಪ್ರಾಸಿಕ್ಯೂಶನ್ ತಿಳಿಸಿತ್ತು.
ಟೆಲಿಫೋನ್ ಸಂಭಾಷಣೆಯಲ್ಲಿ ಆರೋಪಿಗಳು, ಭಯೋತ್ಪಾದಕ ದಾಳಿಯನ್ನು ನಡೆಸಿದ ಉಗ್ರರಿಗೆ ಆದೇಶ ಹಾಗೂ ಸೂಚನೆಗಳನ್ನು ನೀಡುತ್ತಿದ್ದರೆನ್ನಲಾಗಿದೆ. ಈ ಉನ್ನತ ಮಟ್ಟದ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ಆರೋಪಿಗಳ ಧ್ವನಿ ಮಾದರಿಗಳನ್ನು ಸಂಗ್ರಹಿಸುವುದು ಅಗತ್ಯವೆಂದು ಪ್ರಾಸಿಕ್ಯೂಶನ್ ವಾದಿಸಿತ್ತು. ಪ್ರಕರಣದ ತನಿಖೆಗೆ ಸಂಬಂಧಿಸಿದ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ, ದಾಳಿಯಲ್ಲಿ ಪಾಲ್ಗೊಂಡ ಉಗ್ರರಾದ ಅಜ್ಮಲ್ ಕಸಬ್ ಹಾಗೂ ಫಾಹೀಮ್ ಅನ್ಸಾರಿ ಅವರನ್ನು ತಲೆಮರೆಸಿಕೊಂಡವರೆಂದು ಘೋಷಿಸಬೇಕೆಂಬ ಪ್ರಾಸಿಕ್ಯೂಶನ್ ಮನವಿಯನ್ನು ಕೂಡಾ ನ್ಯಾಯಾಲಯ ತಿರಸ್ಕರಿಸಿದೆ. 26/11 ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನವು, ಝಕಿವುರ್ರಹ್ಮಾನ್ ಲಖ್ವಿ ಸೇರಿದಂತೆ ಲಷ್ಕರೆ ತಯ್ಯಿಬಾ ಗುಂಪಿನ ಏಳು ಮಂದಿ ಶಂಕಿತ ಉಗ್ರರನ್ನು ಬಂಧಿಸಿದೆ.
ಆರೋಪಿಗಳಾದ ಅಬ್ದುಲ್ ವಾಜಿದ್, ಮಝರ್ ಇಕ್ಬಾಲ್, ಹಮದ್ ಅಮೀನ್ ಸಾದಿಕ್, ಶಾಹಿದ್ ಜಮೀಲ್ ರಿಯಾಝ್, ಜಮೀಲ್ ಅಹ್ಮದ್ ಹಾಗೂ ಯೂನಿಸ್ ಅಂಜುಮ್ ಕಳೆದ ಆರು ವರ್ಷಗಳಿಂದ ಅದಿಯಾಲಾ ಜೈಲಿನಲ್ಲಿದ್ದಾರೆ. ಪ್ರಕರಣದ ಮುಖ್ಯ ಆರೋಪಿ 56 ವರ್ಷದ ಲಖ್ವಿ ಕಳೆದ ವರ್ಷದ ಎಪ್ರಿಲ್ 10ರಂದು ಅದಿಯಾ ಜೈಲಿನಿಂದ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು.





