ಭ್ರಷ್ಟಾಚಾರ ಪಿಡುಗು: ಭಾರತಕ್ಕೆ 76ನೆ ಸ್ಥಾನ
ಡೆನ್ಮಾರ್ಕ್ ಕನಿಷ್ಠ; ಉ.ಕೊರಿಯಾ ಗರಿಷ್ಠ
ಬರ್ಲಿನ್,ಜ.27: ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರದ ಪಿಡುಗು, ಜಗತ್ತಿನೆಲ್ಲೆಡೆ ಈಗಲೂ ಪ್ರಮುಖ ಸಮಸ್ಯೆಯಾಗಿಯೇ ಉಳಿದಿದೆ. ಆದಾಗ್ಯೂ 2015ರಲ್ಲಿ ಭಾರತ ಮತ್ತಿತರ ದೇಶಗಳು ಭ್ರಷ್ಟಾಚಾರ ನಿಯಂತ್ರಣದಲ್ಲಿ ಅಮೆರಿಕ ಹಾಗೂ ಬ್ರಿಟನ್‌ಗಳಂತೆ ಪ್ರಗತಿಯನ್ನು ಸಾಧಿಸುವಲ್ಲಿ ಸಫಲತೆಯನ್ನು ಕಂಡಿವೆ.
ಭ್ರಷ್ಟಾಚಾರ ಕುರಿತ ಜಾಗತಿಕ ಕಣ್ಗಾವಲು ಸಂಸ್ಥೆ ‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್’ನ ಬುಧವಾರ ಬಿಡುಗಡೆಗೊಳಿಸಿದ ವಾರ್ಷಿಕ ವರದಿಯ ಪ್ರಕಾರ, ಸಾರ್ವಜನಿಕಕ್ಷೇತ್ರದ ಭ್ರಷ್ಟಾಚಾರ ಕುರಿತ 168 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು 76ನೆ ಸ್ಥಾನಕ್ಕೇರಿದೆ. 2013 ಹಾಗೂ 2014ರಲ್ಲಿ ಭಾರತವು ಪಟ್ಟಿಯಲ್ಲಿ ಕ್ರಮವಾಗಿ 84 ಹಾಗೂ 85ನೆ ಸ್ಥಾನದಲ್ಲಿತ್ತು.
ಇತ್ತ, ಭೂತಾನ್ ಹೊರತುಪಡಿಸಿ,ಭ್ರಷ್ಟಾಚಾರ ನಿಯಂತ್ರಣದಲ್ಲಿ ಭಾರತದ ಉಳಿದ ನೆರೆಹೊರೆಯ ರಾಷ್ಟ್ರಗಳ ಸಾಧನೆ ತೀರಾ ಕಳಪೆಯಾಗಿದೆ. ಪಟ್ಟಿಯಲ್ಲಿ ಭೂತಾನ್ 27ನೆ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಆದರೆ ಚೀನಾ 83 ಹಾಗೂ ಬಾಂಗ್ಲಾದೇಶ 139 ಸ್ಥಾನದಲ್ಲಿದ್ದು, ಭ್ರಷ್ಟಾಚಾರ ನಿಯಂತ್ರಣದಲ್ಲಿ ಯಾವುದೇ ಸುಧಾರಣೆಯನ್ನು ಕಂಡಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ, ಪಾಕಿಸ್ತಾನ,ಶ್ರೀಲಂಕಾ ಹಾಗೂ ನೇಪಾಳಗಳ ಸ್ಥಿತಿಯಲ್ಲಿ ಕೊಂಚ ಸುಧಾರಣೆಯಾಗಿದೆ.
ಈ ಸಾಲಿನಲ್ಲಿ ಅಮೆರಿಕವು ಭ್ರಷ್ಟಾಚಾರ ಸೂಚ್ಯಂಕದಲ್ಲಿ 76 ಅಂಕಗಳನ್ನು ಪಡೆಯುವ ಮೂಲಕ 16ನೇ ಸ್ಥಾನಕ್ಕೇರಿದ್ದರೆ, ಬ್ರಿಟನ್ 81 ಅಂಕಗಳೊಂದಿಗೆ, ಮೂರು ಸ್ಥಾನಗಳಷ್ಟು ಮೇಲೇರಿದ್ದು 10ನೇ ರ್ಯಾಂಕ್ ಪಡೆದಿದೆ.
ಯುರೋಪ್ ರಾಷ್ಟ್ರವಾದ ಡೆನ್ಮಾರ್ಕ್ ಸತತ ಎರಡನೆ ವರ್ಷವೂ ಜಗತ್ತಿನಲ್ಲೇ ಅತ್ಯಂತ ಕನಿಷ್ಠ ಭ್ರಷ್ಟಾಚಾರವಿರುವ ದೇಶವೆಂಬ ಹೆಗ್ಗಳಿಕೆ ಪಾತ್ರವಾಗಿದೆ. 91 ಅಂಕಗಳೊಂದಿಗೆ ಅದು ಪಟ್ಟಿಯಲ್ಲಿ ಮೊದಲನೆ ಸ್ಥಾನ ಪಡೆದಿದೆ. ಫಿನ್‌ಲ್ಯಾಂಡ್,ಸ್ವೀಡನ್, ನ್ಯೂಝಿಲ್ಯಾಂಡ್, ನೆದರ್‌ಲ್ಯಾಂಡ್ಸ್, ನಾರ್ವೆ, ಸ್ವಿಟ್ಜರ್‌ಲ್ಯಾಂಡ್, ಸಿಂಗಾಪುರ ಹಾಗೂ ಕೆನಡಾ ಕ್ರಮವಾಗಿ 2ರಿಂದ 10ರವರೆಗಿನ ಸ್ಥಾನಗಳನ್ನು ಗಳಿಸಿವೆ.
ಉತ್ತರ ಕೊರಿಯಾ ಹಾಗೂ ಸೊಮಾಲಿಯಾ, 8 ಅಂಕಗಳೊಂದಿಗೆ ಜಗತ್ತಿನಲ್ಲೇ ಅತ್ಯಧಿಕ ಭ್ರಷ್ಟಾಚಾರ ಪೀಡಿತ ರಾಷ್ಟ್ರಗಳೆಂಬ ಕುಖ್ಯಾತಿಗೆ ಪಾತ್ರವಾಗಿದೆ.





