ತಾರತಮ್ಯ ವಿರುದ್ಧ ಜೆಎನ್‌ಯು ವಿದ್ಯಾರ್ಥಿ ಪ್ರತಿಭಟನೆ ತೀವ್ರ
ಹೊಸದಿಲ್ಲಿ,ಜ.27: ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದು ದಿಲ್ಲಿಯ ಜವಾಹರಲಾಲ್‌ನೆಹರೂ ವಿವಿಯ ವಿದ್ಯಾರ್ಥಿಗಳು ಬುಧವಾರ ತರಗತಿಗಳನ್ನು ಬಹಿಷ್ಕರಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು.
ತನ್ಮಧ್ಯೆ ತಾರತಮ್ಯವನ್ನು ಆರೋಪಿಸಿ ದಲಿತ ಸಂಶೋಧಕ ಮದನ ಮೆಹೆರ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ನಂತರ ತಾರತಮ್ಯದ ವಿರುದ್ಧ ವಿವಿಯ ಇನ್ನಷ್ಟು ವಿದ್ಯಾರ್ಥಿಗಳು ಧ್ವನಿಯೆತ್ತಿದ್ದಾರೆ.
ತನ್ನ ಸ್ಕಾಲರ್‌ಶಿಪ್ ಹಣವನ್ನು ಮಂಜೂರು ಮಾಡುತ್ತಿಲ್ಲ ಎಂದು ಮೆಹೆರ್ ಆರೋಪಿಸಿದರೆ ತಮ್ಮ ಎಂ.ಫಿಲ್ ಮತ್ತು ಪಿಎಚ್‌ಡಿ ಪ್ರಬಂಧಗಳನ್ನು ಪೂರ್ಣಗೊಳಿಸಲು ತಮ್ಮ ಅಂಕಗಳನ್ನು ಪರಿಗಣಿಸಲಾಗುತ್ತಿಲ್ಲ ಎಂದು ಕವಿತಾ ಮತ್ತು ಇತರ ಕೆಲವರು ಆರೋಪಿಸಿದ್ದಾರೆ.
ಆದರೆ ಮೆಹೆರ್ ಪ್ರಕರಣವನ್ನು ಆದ್ಯತೆಯಿಂದ ಪರಿಶೀಲಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಅವರ ಸ್ಕಾಲರ್‌ಶಿಪ್ ಸಮಸ್ಯೆ ಬಗೆಹರಿಯಲಿದೆ. ಇತರ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ನಾನು ಖುದ್ದಾಗಿ ಪ್ರಯತ್ನಿಸುತ್ತೇನೆ ಎಂದು ಸೆಂಟರ್ ಫಾರ್ ಇಂಟರ್‌ನ್ಯಾಷನಲ್ ಸ್ಟಡೀಸ್(ಸಿಐಎಸ್)ನ ಡೀನ್ ಅನುರಾಧಾ ಚೆನಾಯ್ ತಿಳಿಸಿದರು.
ನೂತನ ಕುಲಪತಿಗಳು ಬುಧವಾರ ಅಧಿಕಾರ ಸ್ವೀಕರಿಸಿದ್ದು,ಈ ವಿಷಯವನ್ನು ತಕ್ಷಣ ಅವರ ಗಮನಕ್ಕೆ ತರುವುದಾಗಿ ಸಿಐಎಸ್ ತಿಳಿಸಿದೆ.
ಜ.25ರಂದು ವಿವಿ ಕುಪತಿಗಳಿಗೆ ಬರೆದಿರುವ ಪತ್ರದಲ್ಲಿ ಮೆಹೆರ್ ತನ್ನ ಸೀನಿಯರ್ ರಿಸರ್ಚ್ ಫೆಲೋಶಿಪ್‌ನ್ನು ಬಿಡುಗಡೆಗೊಳಿಸದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದರು. ಒಂದು ವರ್ಷದಿಂದಲೂ ತನ್ನ ಪಿಎಚ್‌ಡಿಯನ್ನು ಮುಂದುವರಿಸಲು ತನಗೆ ಅವಕಾಶವನ್ನು ನಿರಾಕರಿಸಲಾಗುತ್ತಿದೆ ಎಂದೂ ಅವರು ಆಪಾದಿಸಿದ್ದಾರೆ.
ಈ ಕೇಂದ್ರದಿಂದ ಒಬ್ಬನೇ ಒಬ್ಬ ದಲಿತ ವಿದ್ಯಾರ್ಥಿಯು ಪಿಎಚ್‌ಡಿಯನ್ನು ಪಡೆದಿಲ್ಲ ಎಂದು ಆರ್‌ಟಿಐ ಕಾಯ್ದೆಯಡಿ ತನಗೆ ಸಿಕ್ಕಿರುವ ಉತ್ತರವನ್ನೂ ಮೆಹೆರ್ ಬಹಿರಂಗಗೊಳಿಸಿದ್ದಾರೆ.
ಮೆಹೆರ್ 2013 ರಲ್ಲಿ ಕ್ಷೇತ್ರ ಪ್ರವಾಸಕ್ಕೆಂದು 66,000 ರೂ.ಅನುದಾನ ಪಡೆದಿದ್ದರು. ಆದರೆ ಅವರು ಪ್ರವಾಸಕ್ಕೆ ಹೋಗಿರಲಿಲ್ಲ. ಆ ಹಣವನ್ನು ಮರಳಿಸದ ಹೊರತು ಅವರ ಸ್ಕಾಲರ್‌ಶಿಪ್ ಮಂಜೂರಾತಿ ಸಾಧ್ಯವಿಲ್ಲ ಎಂದು ವಿವಿ ಅಧಿಕಾರಿಗಳು ಹೇಳಿದ್ದಾರೆ.





