ವಿಧಾನಸಭಾ ಉಪಚುನಾವಣೆ: ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಬೆಂಗಳೂರು, ಜ.27: ರಾಜ್ಯದ ಆಡಳಿತಾ ರೂಢ ಕಾಂಗ್ರೆಸ್, ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ಮೂರು ಕ್ಷೇತ್ರಗಳ ಉಪ ಚುನಾವಣಾ ಅಖಾಡ, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ರಂಗೇರಿದೆ.
ಬೆಂಗಳೂರಿನ ಹೆಬ್ಬಾಳ, ರಾಯಚೂರಿನ ದೇವದುರ್ಗ ಹಾಗೂ ಬೀದರ್ ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ಘಟಾನುಘಟಿ ಅಭ್ಯರ್ಥಿಗಳು ಕೊನೆಯ ಕ್ಷಣದಲ್ಲಿ ಅಪಾರ ಸಂಖ್ಯೆಯ ತಮ್ಮ ಬೆಂಬಲಿಗರು ಹಾಗೂ ಮುಖಂಡರೊಂದಿಗೆ ನಾಮಪತ್ರ ಸಲ್ಲಿಸಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಆರಂಭವಾಗಿದೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಕಾಂಗ್ರೆಸಿನ ರೆಹಮಾನ್ ಶರೀಫ್, ಬಿಜೆಪಿಯ ನಾರಾಯಣಸ್ವಾಮಿ ಹಾಗೂ ಜೆಡಿಎಸ್‌ನ ಇಸ್ಮಾಯೀಲ್ ಶರೀಫ್ ತಮ್ಮ-ತಮ್ಮ ಪಕ್ಷಗಳ ಹಿರಿಯ ಮುಖಂಡರ ನೇತೃತ್ವದಲ್ಲಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.
ಅತ್ತ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ವೆಂಕಟೇಶ್ ನಾಯಕ್ ಅವರ ಪುತ್ರ ರಾಜಶೇಖರ್ ನಾಯಕ್(ಕಾಂಗ್ರೆಸ್), ಬಿಜೆಪಿಯಿಂದ ಮಾಜಿ ಸಚಿವ ಶಿವನಗೌಡ ನಾಯಕ್ ಹಾಗೂ ಜೆಡಿಎಸ್ ಪಕ್ಷದಿಂದ ಕರಿಯಮ್ಮ ನಾಯಕ್ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸಿನ ರಹೀಮ್ ಖಾನ್, ಬಿಜೆಪಿಯ ಪ್ರಕಾಶ್ ಖಂಡ್ರೆ ಹಾಗೂ ಜೆಡಿಎಸ್‌ನಿಂದ ಅಯಾಝ್ ಖಾನ್ ಸೇರಿದಂತೆ ಒಟ್ಟು 7 ಮಂದಿ 15 ನಾಮಪತ್ರಗಳನ್ನು ಸಲ್ಲಿಸಿದ್ದು, ಉಪ ಚುನಾವಣಾ ಅಖಾಡ ರಂಗೇರಿದೆ. ನಾಳೆ (ಜ.28) ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು, ಜ.30 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ.
ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ‘ಕೈ’ವಶ ಮಾಡಿಕೊಳ್ಳಲು ಆಡಳಿತಾರೂಢ ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಈ ಮಧ್ಯೆಯೇ ಕಾಂಗ್ರೆಸ್ ಗೆಲುವಿಗೆ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ತೊಡರುಗಾಲಾಗಿವೆ.
ಅಲ್ಲದೆ, ವಿಪಕ್ಷಗಳು ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಆಡಳಿತ ಪಕ್ಷದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಚುನಾವಣಾ ಅಖಾಡಕ್ಕಿಳಿದಿವೆ. ಹೀಗಾಗಿ ಜ.13ರಂದು ನಡೆಯಲಿರುವ ಉಪ ಚುನಾವಣೆ ಮತದಾನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
♦♦♦
ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನಿಸಿದ್ದು, ಅವರು ಪ್ರಚಾರಕ್ಕೆ ಬರಲು ಒಪ್ಪಿಗೆ ನೀಡಿದ್ದಾರೆ. ನನ್ನ ಮೊಮ್ಮಗ ಹೆಬ್ಬಾಳ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ. ಟಿಕೆಟ್ ದೊರೆಯದೆ ಅಸಮಾಧಾನಗೊಂಡಿರುವ ಭೈರತಿ ಸುರೇಶ್ ಅವರನ್ನು ಮನವೊಲಿಸಿ ಪ್ರಚಾರ ಕಾರ್ಯಕ್ಕೆ ಕರೆತರುವೆ.
- ಸಿ.ಕೆ.ಜಾಫರ್ ಶರೀಫ್, ಕಾಂಗ್ರೆಸ್ ಹಿರಿಯ ಮುಖಂಡ
♦♦♦
ಹೆಬ್ಬಾಳ ಕ್ಷೇತ್ರ ಬಿಜೆಪಿಯ ಭದ್ರಕೋಟೆ, ಆಡಳಿತಾರೂಢ ಕಾಂಗ್ರೆಸ್ ಏನೇ ಅಧಿಕಾರ ದುರುಪಯೋಗಪಡಿಸಿಕೊಂಡರೂ, ಕ್ಷೇತ್ರದ ಜನತೆ ಅದಕ್ಕೆ ಮನ್ನಣೆ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿನ ಗೊಂದಲ ನನಗೆ ಲಾಭವಾಗಲಿದ್ದು, ಗೆಲ್ಲುವ ವಿಶ್ವಾಸವಿದೆ.
-ನಾರಾಯಣಸ್ವಾಮಿ, ಬಿಜೆಪಿ ಅಭ್ಯರ್ಥಿ







