ರೋಹಿತ್ ಆತ್ಮಹತ್ಯೆ ಪ್ರಕರಣ: ಜಾತಿ ತಾರತಮ್ಯದ ವಿರುದ್ಧ ಚಳವಳಿಗೆ ತಿರುಗಿದ ಪ್ರತಿಭಟನೆ

ಹೊಸದಿಲ್ಲಿ, ಜ.27: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆಯ ವಿರುದ್ಧದ ಪ್ರತಿಭಟನೆಯೀಗ ಕ್ಯಾಂಪಸ್‌ನಲ್ಲಿ ಜಾತಿ ತಾರತಮ್ಯದ ವಿರುದ್ಧದ ಚಳವಳಿಯಾಗಿ ಪರಿವರ್ತನೆಗೊಂಡಿದೆ. ದಿಲ್ಲಿಯ ಜವಾಹರಲಾಲ್ ನೆಹರೂ ವಿವಿ ಸಹಿತ ದೇಶಾದ್ಯಂತದ ಅನೇಕ ಅಗ್ರ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳ ಮುಷ್ಕರದ ಕಾರಣ ಬುಧವಾರ ತರಗತಿಗಳನ್ನು ಅಮಾನತುಗೊಳಿಸಿವೆ.
ರೋಹಿತ್‌ರ ಆತ್ಮಹತ್ಯೆ ಪ್ರಕರಣವೀಗ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಹಾಗೂ ಕೇಂದ್ರದ ಬಿಜೆಪಿ ನೇತೃತ್ವದ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಪಿಎಚ್‌ಡಿ ಮುಂದುವರಿಸಲು ಸಮಯ ವಿಸ್ತರಣೆ ಮಾಡಲು ನಿರಾಕರಿಸಿದುದು ರೋಹಿತ್‌ರ ಆತ್ಮಹತ್ಯೆಗೆ ಕಾರಣವೆಂದು ಆರೋಪಿಸಲಾಗಿದೆ.
ಜೆಎನ್‌ಯು ಹಾಗೂ ದಿಲ್ಲಿ ವಿವಿಗಳ ವಿದ್ಯಾರ್ಥಿಗಳು ಜಂತರ್-ಮಂತರ್‌ನಲ್ಲಿ ಪ್ರದರ್ಶನ ನಡೆಸಿ, ರೋಹಿತ್‌ರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಲಾಗಿರುವ ಮಾನವ ಸಂಪನ್ಮೂಲಾಭಿವೃಧ್ಧಿ ಸಚಿವೆ ಸ್ಮತಿ ಇರಾನಿ, ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹಾಗೂ ಹೈದರಾಬಾದ್ ವಿವಿಯ ಉಪಕುಲಪತಿಯ ರಾಜೀನಾಮೆಗೆ ಆಗ್ರಹಿಸಿದರು.
ಆಮ್ ಆದ್ಮಿ ಪಕ್ಷದ ಸದಸ್ಯರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರೋಹಿತ್ ವೇಮುಲಾರ ದುರಂತ ಸಾವಿನ ಬಳಿಕ ಎಚ್‌ಆರ್‌ಡಿ ಸಚಿವಾಲಯವು ರೋಹಿತ್ ಹಾಗೂ ಇತರ ನಾಲ್ವರು ವಿದ್ಯಾರ್ಥಿಗಳನ್ನು ಬಲಿಪಶುಗಳ್ನಾಗಿಸಿದುದರಲ್ಲಿ ತನ್ನ ಪಾತ್ರವೇನೂ ಇಲ್ಲವೆಂದು ತನ್ನಿಂದಾದ ನಟನೆ ಮಾಡಲು ಪ್ರಯತ್ನಿಸುತ್ತಿದೆ. ಆದರೆ, ರೋಹಿತ್ ಹಾಗೂ ಇತರ ನಾಲ್ವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿವಿಗೆ ಒತ್ತಡ ಹೇರುವಲ್ಲಿ ಅದೂ ಸಕ್ರಿಯ ಪಾತ್ರ ವಹಿಸಿದೆಯೆಂಬುದನ್ನು ಪತ್ರಗಳು ಸ್ಟಷ್ಟವಾಗಿ ತೋರಿಸುತ್ತಿವೆಯೆಂದು ದಿಲ್ಲಿಯ ಎಡಪಂಥೀಯ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿ ಆಶುತೋಷ್ ಕುಮಾರ್ ಆರೋಪಿಸಿದ್ದಾರೆ.
ಹೈದರಾಬಾದ್ ವಿವಿಯ ಆವರಣ ‘ಜಾತಿ ವಾದಿಗಳು ಹಾಗೂ ದೇಶ ವಿರೋಧಿ ಚಟುವಟಿಕೆಗಳ ಅಡ್ಡೆಯಾಗಿದೆ’ ಎಂದು ಬಂಡಾರು ದೂರು ನೀಡಿದ ಬಳಿಕ ಇರಾನಿ ನೇತೃತ್ವದ ಸಚಿವಾಲಯ ವಿವಿಗೆ ಹಲವು ಪತ್ರಗಳನ್ನು ಬರೆದಿತ್ತು.
ರಾಂಚಿಯಲ್ಲಿ ಎನ್‌ಎಸ್‌ಯುಐ ಕಾರ್ಯಕರ್ತರು ಸೋಮವಾರ ರಾಂಚಿ ವಿವಿಯ ಬಾಗಿಲಿನೆದುರು ಬಂಡಾರು ದತ್ತಾತ್ರೇಯರ ಪ್ರತಿಕೃತಿ ದಹಿಸಿದ್ದು, ಜಮ್ಶೆದ್‌ಪುರ, ಧನಾಬಾದ್ ಹಾಗೂ ಸಂತಾಲ ಪರಗಣಗಳಲ್ಲಿ ಪ್ರತಿಭಟನಾ ರ್ಯಾಲಿಗಳು ನಡೆದಿದ್ದವು.
ಹೈದರಾಬಾದ್‌ನಲ್ಲಿ ಪ್ರತಿಭಟನಾಕಾರರು ಹಂಗಾಮಿ ಉಪಕುಲಪತಿಯ ನಿವಾಸಕ್ಕೆ ಬೆಂಕಿ ಹಚ್ಚಿದರು ಹಾಗೂ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಆದರೆ, ಆ ವೇಳೆ ಹಂಗಾಮಿ ಉಪಕುಲಪತಿ ವಿಪಿನ್ ಶ್ರೀವಾಸ್ತವ ಮನೆಯಲ್ಲಿರಲಿಲ್ಲ.
ಉಪವಾಸ ನಿರತರು ಆಸ್ಪತ್ರೆಗೆ ದಾಖಲು
ಹೈದರಾಬಾದ್, ಜ.27: ಹೈದರಾಬಾದ್ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆಯನ್ನು ವಿರೋಧಿಸಿ ಉಪವಾಸ ಮುಷ್ಕರ ನಡೆಸುತ್ತಿದ್ದ 7 ವಿದ್ಯಾರ್ಥಿಗಳಲ್ಲಿ 6 ಮಂದಿಯ ಆರೋಗ್ಯ ಬಿಗಡಾಯಿಸಿದೆ. ಅವರನ್ನು ಆರೋಗ್ಯ ಕೇಂದ್ರವೊಂದಕ್ಕೆ ಸ್ಥಳಾಂತರಿಸಲಾಗಿದೆ.
6 ಮಂದಿ ವಿದ್ಯಾರ್ಥಿಗಳನ್ನು ನಿನ್ನೆ ಆರೋಗ್ಯ ಕೇಂದ್ರವೊಂದಕ್ಕೆ ವರ್ಗಾಯಿಸಲಾಗಿದೆಯೆಂದು ಮುಖ್ಯ ವೈದ್ಯಾಧಿಕಾರಿ ರವೀಂದ್ರ ಕುಮಾರ್ ತಿಳಿಸಿದ್ದಾರೆ.
ಉಪವಾಸ ಮುಷ್ಕರ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೊದಲ ತಂಡವನ್ನು ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಿದ ಬಳಿಕ, ಮೂರು ದಿನಗಳ ಹಿಂದೆ ಆರಂಭಿಸಿದ್ದ ನಿರಶನವನ್ನು ಒಬ್ಬ ವಿದ್ಯಾರ್ಥಿ ಮುಂದುವರಿಸಿದ್ದಾನೆ.







