ಜನರ ನಂಬಿಕೆ ಉಳಿಸಿಕೊಳ್ಳಿ: ಪೊಲೀಸರಿಗೆ ರಾಜ್‌ನಾಥ್ ಸಿಂಗ್ ಕರೆ

ತಿರುವನಂತಪುರ,ಜ.27: ಪೊಲೀಸರು ತಮ್ಮ ಮತ್ತು ಸ್ಥಳೀಯ ಜನರ ನಡುವಿನ ವಿಶ್ವಾಸದ ಕೊರತೆಯನ್ನು ತುಂಬಿಕೊಳ್ಳಬೇಕೆಂದು ಬುಧವಾರ ಇಲ್ಲಿ ಕರೆ ನೀಡಿದ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು,ಇದು ದೇಶದಲ್ಲಿ ಪೊಲೀಸ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ಹೇಳಿದರು.
ಇಲ್ಲಿ ಸಮುದಾಯ ಪೊಲೀಸ್ ವ್ಯವಸ್ಥೆ ಕುರಿತು ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸಮುದಾಯ ಪೊಲೀಸ್ ವ್ಯವಸ್ಥೆಗಾಗಿ ರಾಷ್ಟ್ರವ್ಯಾಪಿ ಕ್ರಿಯಾ ಯೋಜನೆಯೊಂದಕ್ಕೆ ಒತ್ತು ನೀಡಿದ ಅವರು, ಸ್ಥಳೀಯ ಪೊಲೀಸ್ ಠಾಣೆಗಳನ್ನು ಸ್ಥಳೀಯ ಸಮುದಾಯಗಳೊಂದಿಗೆ ಸಂಪರ್ಕಿಸುವ ತಾಂತ್ರಿಕ ವ್ಯವಸ್ಥೆಯೊಂದು ರೂಪುಗೊಳ್ಳಬೇಕಾದ ತುರ್ತು ಅಗತ್ಯವಿದೆ ಎಂದು ಹೇಳಿದರು.
ಸಮುದಾಯ ಪೊಲೀಸ್ ವ್ಯವಸ್ಥೆ ನಮ್ಮ ಪೊಲೀಸ್ ಪಡೆಗಳ ಮಾರ್ಗದರ್ಶಿ ಸಿದ್ಧಾಂತವಾಗಬೇಕಾಗಿದೆ ಮತ್ತು ಇದೇ ವೇಳೆ ಸಂಬಂಧಗಳ ನಿರ್ಮಾಣ ನಮ್ಮ ಆದ್ಯತೆಯಾಗಬೇಕಾಗಿದೆ ಎಂದ ಅವರು,ಸಮುದಾಯ ಪೊಲೀಸ್ ವ್ಯವಸ್ಥೆಯು ನಮ್ಮ ಪೊಲೀಸ್ ವ್ಯವಸ್ಥೆಯಲ್ಲಿ ಸೇರ್ಪಡೆಗೊಳ್ಳಬೇಕು ಎನ್ನುವುದು ತನ್ನ ದೃಢವಾದ ಅಭಿಪ್ರಾಯವಾಗಿದೆ ಎಂದರು.





