ಜ.30: ಹುತಾತ್ಮರ ದಿನದಂದು ವೌನ ಆಚರಣೆಗೆ ಸೂಚನೆ

ಬೆಂಗಳೂರು, ಜ. 27: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮ ರಾದವರ ಸ್ಮರಣಾರ್ಥ ಪ್ರತಿವರ್ಷ ಜ.30ರ ಬೆಳಗ್ಗೆ 11 ಗಂಟೆಗೆ ಎಲ್ಲ್ಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಮೌನ ಆಚರಿಸಲು ಸರಕಾರ ಸೂಚನೆ ನೀಡಿದೆ. ಜ.30ರಂದು ಮಹಾತ್ಮಾ ಗಾಂಧೀಜಿಯನ್ನು ದುಷ್ಕರ್ಮಿ ನಾಥೂರಾಮ್ ಗೋಡ್ಸೆ ಹತ್ಯೆಗೈದ ದಿನವಾಗಿದೆ. ಹುತಾತ್ಮರ ಸ್ಮರಣಾರ್ಥ ಜ.30ರಂದು ನಡೆಸುವ ಮೌನಾಚರಣೆಗೆ ಭಾರತ ಸರಕಾರದ ಸೂಚನೆಗಳಂತೆ ಸ್ಥಾಯಿ ಸೂಚನೆಗಳನ್ನು ನೀಡಲಾಗಿದೆ.
ಜ.30ರ ಬೆಳಗ್ಗೆ 11 ಗಂಟೆಗೆ ರಾಜ್ಯದೆಲ್ಲೆಡೆ ಎಲ್ಲ್ಲ ಕೆಲಸ ಕಾರ್ಯಗಳನ್ನು ಮತ್ತು ಚಲನೆಯನ್ನು ಸ್ಥಗಿತಗೊಳಿಸಿ 2 ನಿಮಿಷಕಾಲ ಮೌನ ಆಚರಿಸುವುದು.
ಎಲ್ಲಿ ಸೈರನ್‌ಗಳು ಅಥವಾ ಸೈನಿಕರ ಬಂದೂಕುಗಳು ಲಭ್ಯವಿವೆಯೋ ಅಂತಹ ಕಡೆಗೆ ಎರಡು ನಿಮಿಷ ಮೌನ ಆಚರಣೆಯ ಕಾಲವನ್ನು ಪ್ರಾರಂಭ ಮತ್ತು ಮುಕ್ತಾಯಕ್ಕೆ ಸೈರನ್ ಅಥವಾ ಸೈನಿಕರ ಬಂದೂಕುಗಳ ಶಬ್ದದ ಮೂಲಕ ಎರಡು ನಿಮಿಷ ಮೌನ ಆಚರಣೆ ಮಾಡುವುದು.
ಬೆಳಗ್ಗೆ 10:59ರಿಂದ 11ಗಂಟೆಯ ವರೆಗೆ ಸೈರನ್ ಬಂದೂಕು ಶಬ್ದ ಮಾಡಿಸುವುದು ಹಾಗೂ ಎರಡು ನಿಮಿಷದ ಮೌನ ಆಚರಣೆಯ ನಂತರ ಪುನಃ 11:02ರಿಂದ 11.03 ನಿಮಿಷದ ವರೆಗೆ ಸೈರನ್/ಬಂದೂಕು ಶಬ್ದವನ್ನು ಮಾಡಿಸುವುದು. ಈ ಪದ್ಧತಿಯನ್ನು ಸೈರನ್/ಬಂದೂಕು ಸೌಲಭ್ಯವಿರುವ ಕಡೆ ಅಳವಡಿಸಿಕೊಳ್ಳುವುದು.
ಶಬ್ದವು (ಎಲ್ಲಿ ಲಭ್ಯ ಇದೆಯೋ ಅಲ್ಲಿ) ಕೇಳಿದ ಕೂಡಲೇ ಅಲ್ಲಿ ವ್ಯಕ್ತಿಗಳು ಆರಂಭದ ಸೂಚನೆಗಾಗಿ ನಿಂತುಕೊಳ್ಳಬೇಕು ಮತ್ತು ಮೌನವನ್ನು ಆಚರಿಸಬೇಕು. ಪ್ರತಿಯೊಬ್ಬ ವ್ಯಕ್ತಿಯು ತನ್ನ ಕೊಠಡಿಯಲ್ಲಿ ಅಥವಾ ಇತರೆ ಯಾವುದೇ ಸ್ಥಳದಲ್ಲಿ ನಿಂತುಕೊಂಡು ಮೌನ ಆಚರಿಸುವುದಕ್ಕಿಂತ ಒಂದೇ ವೇಳೆಗೆ ವ್ಯಕ್ತಿಗಳು ಒಂದು ಸ್ಥಳದಲ್ಲಿ ಸೇರಿ ಮೌನ ಆಚರಿಸಿದರೆ ಅದು ತುಂಬಾ ಪರಿಣಾಮಕಾರಿ ಮತ್ತು ಪ್ರಭಾವಶಾಲಿ ಆಗುತ್ತದೆ. ಆದಾಗ್ಯೂ, ಇದು ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆ ಆಗುವಂತಿದ್ದರೆ ಮೇಲೆ ತಿಳಿಸಿದಂತೆ ಒಂದೇ ಸ್ಥಳದಲ್ಲಿ ಸೇರಲು ಪ್ರಯತ್ನಿಸದೇ ಇರಬಹುದು. ಈ ಎರಡು ನಿಮಿಷಗಳಲ್ಲಿ ಎಲ್ಲ ವರ್ಕ್‌ಶಾಪ್‌ಗಳು ಮತ್ತು ಕಾರ್ಖಾನೆಗಳು ಕೆಲಸ ಸ್ಥಗಿತ ಗೊಳಿಸಬೇಕು. ಈ ಎರಡು ನಿಮಿಷದ ಅವಧಿಯಲ್ಲಿ ವರ್ಕ್‌ಶಾಪ್‌ಗಳು ಮತ್ತು ಕಾರ್ಖಾನೆಗಳು ಶಬ್ದ ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು ಮತ್ತು ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಬೇಕು.
ವಿಮಾನಗಳು, ಹಡಗುಗಳು, ರೈಲುಗಳು ಹೊರಡಲು ಬೆಳಗ್ಗೆ 11ಗಂಟೆಯೆಂದು ನಿಗದಿಪಡಿಸಿದ್ದಲ್ಲಿ ಅಂತಹವುಗಳನ್ನು ಆಯಾ ನಿಲ್ದಾಣಗಳಲ್ಲಿ 2 ನಿಮಿಷಗಳ ಕಾಲ ತಡೆ ಹಿಡಿಯಬೇಕು. ಸಂಕೇತ ವ್ಯವಸ್ಥೆ ಇರದಂತಹ ಪ್ರದೇಶದಲ್ಲಿ ಬೆಳಗ್ಗೆ 11ಗಂಟೆಗೆ 2ನಿಮಿಷಗಳ ಮೌನ ಆಚರಿಸಲು ಸಂಬಂಧಪಟ್ಟವರಿಗೆಲ್ಲ ಸೂಕ್ತ ನಿರ್ದೇಶನವನ್ನು ಕಳುಹಿಸುವುದು.
ಇಲಾಖಾ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿಗಳು ವಿವರವಾದ ಕಾರ್ಯಕ್ರಮಗಳನ್ನು ರೂಪಿಸುವ ಸಂಪೂರ್ಣ ಜವಾಬ್ದಾರಿಯುಳ್ಳವರಾಗಿರುತ್ತಾರೆ. ಬೆಳಗ್ಗೆ 10:44ರಿಂದ 10:56ಗಂಟೆ ವರೆಗೆ 1) ಸುಮಿರನ ಕರಲೆ ಮೇರೆ ಮನ್ 2) ವೈಷ್ಣವೋ ಜನತೋ ತೇನೇ ಕಯೇ ಮತ್ತು 3) ರಘುಪತಿ ರಾಘವ ರಾಜಾರಾಂ ಈ ಕ್ರಮದಲ್ಲಿ 3 ಭಜನೆಗಳನ್ನು ಹಾಡಬೇಕು ಮತ್ತು ಈ ಕಾರ್ಯಕ್ರಮವು ಸಮಾರಂಭದ ಭಾಗ ಆಗಬಹುದು ಎಂದು ಪ್ರಕಟಣೆ ತಿಳಿಸಿದೆ.







