ಉಡುಪಿ : ‘ಚೌಕಾ ಬಾರ್’ ಕಿರುಚಿತ್ರ ಪ್ರದರ್ಶನ- ಸಂವಾದ

ಉಡುಪಿ, ಜ.28: ಉಡುಪಿ ರಂಗಭೂಮಿ ಮತ್ತು ಎಂಜಿಎಂ ಕಾಲೇಜಿನ ಫಿಲ್ಮ್ ಕ್ಲಬ್ ಆಶ್ರಯದಲ್ಲಿ ರಘು ಶಿವಮೊಗ್ಗ ನಿರ್ದೇಶನದ ‘ಚೌಕಾ ಬಾರ್’ ಕಿರುಚಿತ್ರ ಪ್ರದರ್ಶನವು ಗುರುವಾರ ಕಾಲೇಜಿನ ಎ.ವಿ.ಹಾಲ್‌ನಲ್ಲಿ ಜರಗಿತು.
ಪ್ರದರ್ಶನದ ಬಳಿಕ ನಡೆದ ಸಂವಾದದಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ರಘು ಶಿವಮೊಗ್ಗ, ಕೇವಲ 20 ನಿಮಿಷದ ಈ ಕಿರುಚಿತ್ರವನ್ನು 2ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಲಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಕಿರುಚಿತ್ರವೊಂದು ಸಿನೆಮಾ ಥಿಯೇಟರ್‌ನಲ್ಲಿ ಬಿಡುಗಡೆಗೊಂಡ ಕೀರ್ತಿಗೆ ಈ ಚಿತ್ರ ಪಾತ್ರ ವಾಗಿದೆ. ಬೆಂಗಳೂರಿನ ಮಲ್ಟಿಫ್ಲೆಕ್ಸ್‌ನಲ್ಲಿ ಬಿಡುಗಡೆಗೊಂಡ ಈ ಚಿತ್ರವನ್ನು ಸುಮಾರು 700 ಮಂದಿ ವೀಕ್ಷಿಸಿದ್ದರು ಎಂದರು.
ನನ್ನ ಗೆಳೆಯನ ಜೀವನದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಮಾಡಿ ರುವ ಚಿತ್ರ ಇದಾಗಿದೆ. ರಾಂಗ್ ನಂಬರ್ ಕರೆಯೊಂದಿಗೆ ಮನರಂಜನೆ ಮಾಡ ಬಾರದು ಎಂಬ ಸಂದೇಶವನ್ನು ಈ ಚಿತ್ರ ನೀಡುತ್ತದೆ. ಮಾನಸಿಕ ಒತ್ತಡ ಹಾಗೂ ಆರ್ಥಿಕ ಒತ್ತಡದಲ್ಲಿ ಮನುಷ್ಯ ಯಾವ ರೀತಿಯಲ್ಲಿ ಪ್ರತಿಸ್ಪಂದಿಸುತ್ತಾನೆ ಹಾಗೂ ತನ್ನ ಬದುಕನ್ನು ಹಾಳು ಮಾಡಿಕೊಳ್ಳುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸ ಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಮ್, ಕಾಲೇಜಿನ ಪ್ರಾಂಶುಪಾಲೆ ಪ್ರೊ. ಕುಸುಮಾ ಕಾಮತ್, ನಮ್ಮ ಮನೆ ನಮ್ಮ ಮರ ಯೋಜನೆಯ ಅವಿನಾಶ್ ಕಾಮತ್ ಹಾಗೂ ಗುರುರಾಜ್ ಸನಿಲ್ ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕ ಮಂಜುನಾಥ್ ಕಾಮತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಂಗಭೂಮಿಯ ರವಿರಾಜ್ ಎಚ್.ಪಿ. ವಂದಿಸಿದರು.







