ವೇಮುಲ ಆತ್ಮಹತ್ಯೆ ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಾೀಶರ ನೇಮಕ

ಹೊಸದಿಲ್ಲಿ,ಜ.28: ಹೈದರಾಬಾದ್ ಕೇಂದ್ರೀಯ ವಿವಿಯ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಅವರ ಆತ್ಮಹತ್ಯೆಗೆ ಕಾರಣಗಳ ತನಿಖೆಗೆ ಅಲಹಾಬಾದ್ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾೀಶ ನ್ಯಾ.ರೂಪನ್‌ವಾಲ ಅವರನ್ನು ಕೇಂದ್ರ ಸರಕಾರವು ನೇಮಕಗೊಳಿಸಿದೆ. ಇದೇ ವೇಳೆ ವಿವಿಯ ಶಿಕ್ಷಕರು ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಬೆಂಬಲಿಸಿ ಗುರುವಾರ ಉಪವಾಸ ಮುಷ್ಕರವನ್ನು ನಡೆಸಿದರು.
ತಮ್ಮ ಎಲ್ಲ ಬೇಡಿಕೆಗಳು ಈಡೇರುವವರೆಗೂ ವಿದ್ಯಾರ್ಥಿಗಳು ತಮ್ಮ ಹೋರಾಟವನ್ನು ತೀವ್ರಗೊಳಿಸಲಿದ್ದಾರೆ ಎಂದು ವೇಮುಲ ಆತ್ಮಹತ್ಯೆ ಕುರಿತಂತೆ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಾಮಾಜಿಕ ನ್ಯಾಯಕ್ಕಾಗಿ ಜಂಟಿ ಕ್ರಿಯಾ ಸಮಿತಿಯು ಪ್ರಕಟಿಸಿದ ಸಂದರ್ಭದಲ್ಲೇ ಏಕ ಸದಸ್ಯ ನ್ಯಾಯಾಂಗ ಆಯೋಗದ ಅಧ್ಯಕ್ಷರನ್ನಾಗಿ ನ್ಯಾ.ರೂಪನ್‌ವಾಲ ನೇಮಕದ ನಿರ್ಧಾರ ಹೊರಬಿದ್ದಿದೆ.
ತನ್ನ ವರದಿಯನ್ನು ಮೂರು ತಿಂಗಳುಗಳಲ್ಲಿ ಸಲ್ಲಿಸುವಂತೆ ಆಯೋಗಕ್ಕೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳ ಪುನರಾರಂಭಕ್ಕೆ ಮುನ್ನ ಕುಲಪತಿ ಅಪ್ಪಾರಾವ್ ಪೊಡಿಲೆ ಮತ್ತು ಪ್ರಭಾರ ಕುಲಪತಿ ವಿಪಿನ್ ಶ್ರೀವಾಸ್ತವ ಅವರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಹೈದರಾಬಾದ್‌ನಲ್ಲಿ ವಿವಿಯ ಮೂವರು ಶಿಕ್ಷಕರು ಗುರುವಾರ ಒಂದು ದಿನದ ಉಪವಾಸ ಮುಷ್ಕರವನ್ನು ನಡೆಸಿದರು.





