ಬೆಂಗಳೂರು.ಜ.28: ಪ್ರತಿಷ್ಠಿತ ಅಂತಾರಾಷ್ಟ್ರೀಯ 8ನೇ ಸಿನಿಮೋತ್ಸವ - ನಟಿ ಜಯಾ ಬಚ್ಚನ್ ರಿಂದ ಉದ್ಘಾಟನೆ
ಬೆಂಗಳೂರು.ಜ.28: ಪ್ರತಿಷ್ಠಿತ ಅಂತಾರಾಷ್ಟ್ರೀಯ 8ನೇ ಸಿನಿಮೋತ್ಸವಕ್ಕೆ ರಾಜ್ಯಸಭಾ ಸದಸ್ಯೆ ಹಾಗೂ ಹೆಸರಾಂತ ಚಲನಚಿತ್ರ ನಟಿ ಜಯಾ ಬಚ್ಚನ್ ನಂದಾದೀವಿಗೆ ಬೆಳಗುವ ಮೂಲಕ ಅದ್ದೂರಿ ಚಾಲನೆ ನೀಡಿದರು. ವಿಧಾನಸೌಧದ ಪೂರ್ವ ದ್ವಾರದಲ್ಲಿ ಆಯೋಜಿಸಲಾದ ಭವ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ದೇಶ ವಿದೇಶಗಳ 50ಕ್ಕೂ ಹೆಚ್ಚು ಚಿತ್ರರಂಗದ ಪ್ರತಿನಿಧಿಗಳು, ನಿರ್ದೇಶಕರು, ತಂತ್ರಜ್ಞರು ಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಜಯಾ ಬಚ್ಚನ್, ಚಿತ್ರನಗರಿ ನಿರ್ಮಿಸಲು ಮೈಸೂರಿನಲ್ಲಿ ರಾಜ್ಯ ಸರ್ಕಾರ ಒಂದು ಸಾವಿರ ಎಕರೆ ಭೂಮಿ ನೀಡಿರುವುದು ಅತ್ಯಂತ ಉತ್ತಮ ಮತ್ತು ಸ್ತ್ಯುತ್ಯಾರ್ಹ ಬೆಳವಣಿಗೆಯಾಗಿದೆ. ಸರ್ಕಾರಗಳು ಕಲೆ ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ಮತ್ತು ಸಹಕಾರ ನೀಡಬೇಕು ಎಂದರು. ಕನ್ನಡ ಚಿತ್ರೋದ್ಯಮಕ್ಕೆ ಭವ್ಯ ಇತಿಹಾಸವಿದ್ದು, ಉತ್ತಮ ಭವಿಷ್ಯವೂ ಇದೆ. ಕನ್ನಡ ಚಿತ್ರೋದ್ಯಮದ ಬೆಳವಣಿಗೆ ಕುರಿತು ಬಾಲಿವುಡ್‌ನಲ್ಲಿ ಪ್ರಸ್ತಾಪಿಸುವುದಾಗಿ ಜಯಾ ಬಚ್ಚನ್ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಸಿನಿಮೋತ್ಸವ ನಡೆಯುತ್ತಿರುವುದು ಸಂತಸವುಂಟು ಮಾಡಿದೆ. ಇದೇ ಮೊದಲ ಬಾರಿಗೆ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಮುಂಭಾಗದಲ್ಲಿ ಸಿನಿಮೋತ್ಸವ ಉದ್ಘಾಟನೆಯಾಗಿದೆ. ರಾಜ್ಯಕ್ಕೆ ಇದೊಂದು ಪ್ರಮುಖ ಬೆಳವಣಿಗೆ ಎಂದರು. ಈ ಹಿಂದೆ ಕನ್ನಡ ಚಿತ್ರೋದ್ಯಮದಲ್ಲಿ ತಂತ್ರಜ್ಞಾನ ಮತ್ತು ಬಂಡವಾಳದ ಕೊರತೆ ಇದ್ದಾಗ ಅತ್ಯುತ್ತಮ ಚಿತ್ರಗಳು ಮೂಡಿ ಬಂದಿದ್ದವು. ಸಾಮಾಜಿಕ ಕಳಕಳಿ ಮತ್ತು ಸಮಾಜಕ್ಕೆ ಸಂದೇಶ ನೀಡುವ ಚಿತ್ರಗಳು ಮೂಡಿ ಬಂದಿದ್ದವು. ಅಶ್ಲೀಲತೆ ಮತ್ತು ಕ್ರೌರ್ಯದ ಚಿತ್ರಗಳು ಕಡಿಮೆಯಾಗಲಿ. ಸಿನಿಮಾ ಒಂದು ಪ್ರಭಾವಿ ಮಾಧ್ಯಮ ಎನ್ನುವುದನ್ನು ಮರೆಯಬಾರದು. ಸಮಾಜ, ಯುವ ಸಮುದಾಯಗಳನ್ನು ಗಮದಲ್ಲಿಟ್ಟುಕೊಂಡು ಚಿತ್ರಗಳನ್ನು ನಿರ್ಮಿಸಬೇಕು ಎಂದರು.
ಕನ್ನಡ ಚಿತ್ರೋದ್ಯಮ ಇಷ್ಟೊಂದು ದೂರ ಸಾಗಿ ಬಂದಿದ್ದರೆ ಅದಕ್ಕೆ ನೂರಾರು ನಿರ್ದೇಶಕರು, ಹಲವಾರು ತಂತ್ರಜ್ಞರು, ಕಲಾವಿದರು ಕಾರಣರಾಗಿದ್ದಾರೆ. ಚಿತ್ರೋದ್ಯಮಕ್ಕೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೆರವು ನೀಡಲಿದೆ. ಕಲೆ ಮತ್ತು ಸಂಸ್ಕೃತಿ ಬೆಳವಣಿಗೆಗೆ ಸರ್ಕಾರ ಬೆಂಬಲ ಸಹಕಾರ ನೀಡಲಿದೆ. ಕನ್ನಡ ಚಿತ್ರಗಳು ಅಂತಾರಾಷ್ಟ್ರೀಯ ಪಾರಿತೋಷಕಗಳನ್ನು ತರುವಂತಾಗಲಿದೆ ಎಂದು ಆಶಿಸಿದರು. ವಾರ್ತಾ ಮತ್ತು ಸಂಪರ್ಕ ಸಚಿವ ಆರ್. ರೋಷನ್ ಬೇಗ್, ಇಂತಹ ಚಿತ್ರೋತ್ಸವ ಬೆಂಗಳೂರಿನಲ್ಲಿ ನಡೆಸಲು ಚಲನಚಿತ್ರ ಅಕಾಡೆಮಿ ಮತ್ತಿತರ ಸಹಯೋಗ ಸಂಸ್ಥೆಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಿವೆ. ರಾಜ್ಯ ಸರ್ಕಾರ ಚಿತ್ರೋದ್ಯಮಕ್ಕೆ ಉತ್ತಮ ರೀತಿಯಲ್ಲಿ ಸಹಕಾರ ಮತ್ತು ಬೆಂಬಲ ನೀಡುತ್ತಿದೆ ಎಂದರು. ಚಿತ್ರೋತ್ಸವ ಸ್ಮರಣ ಸಂಚಿಕೆಯನ್ನು ಬಾಲಿವುಡ್‌ನ ಹಿರಿಯ ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅನಾವರಣಗೊಳಿಸಿ, ಇಂತಹ ಸಿನಿಯೋತ್ಸವಗಳಿಂದ ಚಿತ್ರೋದ್ಯಮದ ಅಭ್ಯುದಯಕ್ಕೆ ಸಹಕಾರಿಯಾಗಲಿದೆ. ತಂತ್ರಜ್ಞಾನ ಬೆಳವಣಿಗೆಗೆ ಚಿತ್ರೋತ್ಸವಗಳು ಅಗತ್ಯ ಎಂದರು. ವಸತಿ ಸಚಿವ ಡಾ: ಎಂ. ಎಚ್. ಅಂಬರೀಷ್, ಇಂತಹ ಚಿತ್ರೋದ್ಯಮ ಬೆಂಗಳೂರಿನಲ್ಲಿ ನಡೆಯಲು ಮುಖ್ಯಮಂತ್ರಿ ಕಾರಣ. ಸಿದ್ದರಾಮಯ್ಯ ಅವರಿಗೆ ಸಾಹಿತ್ಯ, ಕಲೆ ಬಗ್ಗೆ ಅತ್ಯಂತ ಕಳಕಳಿ ಮತ್ತು ಪ್ರೀತಿ ಇದೆ. ಇದೊಂದು ನಿಜಕ್ಕೂ ಸಂತಸದ ದಿನ. ಕನ್ನಡ ಚಿತ್ರೋದ್ಯಮ ಬರುವ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಲಿದೆ. ಬಾಲಿವುಡ್ ಮಟ್ಟದ ಚಿತ್ರಗಳನ್ನು ನೀಡಲಿದೆ. ಕನ್ನಡಿಗರು ಎಲ್ಲಾ ಭಾಷೆಗಳ ಚಿತ್ರಗಳನ್ನು ಸ್ವೀಕರಿಸುತ್ತಾರೆ. ಮೆಜೆಸ್ಟಿಕ್‌ನಲ್ಲಿ ಎಲ್ಲಾ ಚಿತ್ರಗಳು ಪ್ರದರ್ಶನಗೊಳ್ಳುವಂತೆ. ಕನ್ನಡಿಗರು ಉದಾರಿಗಳು ಎಂದು ಬಣ್ಣಿಸಿದರು. ಮುಖ್ಯ ಅತಿಥಿಯಾಗಿದ್ದ ಹಾಲಿವುಡ್ ಚಲನಚಿತ್ರ ನಿರ್ಮಾಪಕ ಡಾ. ಅಶೋಕ್ ಅಮೃತ್‌ರಾಜ್ ಮಾತನಾಡಿ, ಚಿತ್ರಜಗತ್ತನ್ನು ಅರಿಯಲು ಯುವ ಕಲಾವಿದರು, ತಂತ್ರಜ್ಞರಿಗೆ ಇದು ಉತ್ತಮ ವೇದಿಕೆಯಾಗಿದೆ. ಸಂಸ್ಕೃತಿಯ ಪರಿಚಯಕ್ಕೆ ಪೂರಕವಾಗಿದೆ ಎಂದರು. ಕನ್ನಡ ಚಿತ್ರೋದ್ಯಮ ನಡೆದು ಬಂದ ಹಾದಿ ಕುರಿತ ನೃತ್ಯ ರೂಪಕ ಗಮನ ಸೆಳೆಯಿತು. ಖ್ಯಾತ ಭರತ ನಾಟ್ಯ ಕಲಾವಿದೆ ಶೋಭನಾ ಅವರ ನೃತ್ಯ ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ನಿರುಪಮಾ - ರಾಜೇಂದ್ರ ಜೋಡಿಯ ನೃತ್ಯ ಸಮಾರಂಭಕ್ಕೆ ಮೆರಗು ತಂದಿತು. ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟ ನಟಿಯರು ಹಾಗೂ ಇತರೆ ಭಾಷಾ ಚಿತ್ರಗಳ ನಟ ನಟಿಯರು, ತಜ್ಞರು ಚಿತ್ರೋತ್ಸವದಲ್ಲಿ ಲಗುಬಗೆಯಿಂದ ಪಾಲ್ಗೊಂಡಿದ್ದರು. ಕನ್ನಡ ಚಲನಚಿತ್ರರಂಗ ಖ್ಯಾತಿಯ ಡಾ. ಶಿವರಾಜ್‌ಕುಮಾರ್, ಸುದೀಪ್, ತೆಲುಗು ಚಲನಚಿತ್ರ ಕಲಾವಿದ ಡಿ. ವೆಂಕಟೇಶ್ ಪಾಲ್ಗೊಂಡದ್ದರು. ಫೆಬ್ರವರಿ 5ರ ವರೆಗೆ ನಡೆಯುವ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಈ ಬಾರಿ ಅರಮನೆಗಳ ನಗರಿ ಮೈಸೂರನ್ನು ಒಳಪಡಿಸಿಕೊಳ್ಳಲಾಗಿದೆ. ಸಿನಿಮೋತ್ಸವವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯೋದ್ಯಮ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದು, 60 ದೇಶಗಳ ಚಲನಚಿತ್ರಗಳು ಎರಡೂ ನಗರಗಳ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ 8ನೆ ಆವೃತಿಯ ಚಿತ್ರಗಳು ಪ್ರದರ್ಶನಗೊಳ್ಳುವ ರಾಜಾಜಿನಗರದ ಆರಿಯನ್ ಮಾಲ್‌ಗೆ ಬೆಂಗಳೂರು ನಗರ ಸಾರಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ. ನಗರದ ನಾನಾ ಭಾಗಗಳಿಂದ ಈ ಬಸ್‌ಗಳ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.







