ಇಂದು ಎರಡನೆ ಟ್ವೆಂಟಿ-20 ಪಂದ್ಯ; ಧೋನಿ ಪಡೆಗೆ ಸರಣಿ ಗೆಲುವಿನ ಚಿತ್ತ

ಮೆಲ್ಬೋರ್ನ್, ಜ.28: ಗಣರಾಜ್ಯೋತ್ವದ ದಿನ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಗೆಲುವಿನ ಸವಿಯುಂಡ ಧೋನಿ ಪಡೆ ಶುಕ್ರವಾರ ನಡೆಯುಲಿರುವ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಗೆಲುವಿನೊಂದಿಗೆ 2-0 ಅಂತರದಲ್ಲಿ ಸರಣಿ ಗೆಲ್ಲುವ ಕನಸು ಕಾಣುತ್ತಿದೆ.
ತಂಡಕ್ಕೆ ಹಿರಿಯ ಆಟಗಾರರ ಸೇರ್ಪಡೆಯಿಂದ ತಂಡಕ್ಕೆ ಆನೆ ಬಲ ಬಂದಂತಾಗಿದೆ.ಆಶೀಶ್ ನೆಹ್ರಾ, ಯುವರಾಜ್ ಸಿಂಗ್ ಕಳೆದ ಪಂದ್ಯದಲ್ಲಿ ಆಡಿದ್ದರು. ಯುವ ಆಟಗಾರರಾದ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಚೊಚ್ಚಲ ಟ್ವೆಂಟಿ-20 ಪಂದ್ಯದಲ್ಲಿ ಚೆನ್ನಾಗಿ ಆಡಿದ್ದಾರೆ. ಇದರಿಂದಾಗಿ ಭಾರತ ತಂಡ ಆಸ್ಟ್ರೇಲಿಯ ವಿರುದ್ಧ ಗೆಲುವಿನ ನಗೆ ಬೀರಿತು.
ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಚೆನ್ನಾಗಿ ಆಡಿದ್ದರಿಂದ ಭಾರತ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಜಯಿಸಿದರೆ ಭಾರತಕ್ಕೆ ಸರಣಿ ಗೆಲುವು ಸಾಧ್ಯವಾಗುತ್ತದೆ. ಆಸ್ಟ್ರೇಲಿಯಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.ಸೋತರೆ ಸರಣಿ ಕೈ ತಪ್ಪುತ್ತದೆ. ಸರಣಿಯ ಕೊನೆಯ ಪಂದ್ಯ ರವಿವಾರ ನಡೆಯಲಿದೆ. ಭಾರತಕ್ಕೆ ರ್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೆ ತಲುಪಲು ಇನ್ನುಳಿದಿರುವ ಎರಡು ಪಂದ್ಯಗಳನ್ನು ಜಯಿಸಬೇಕಾಗಿದೆ. ಕ್ಲೀನ್ ಸ್ವೀಪ್ ಮಾಡುವುದು ತಂಡದ ಗುರಿಯಾಗಿದೆ.
ಉಪನಾಯಕ ವಿರಾಟ್ ಕೊಹ್ಲಿ ಇಷ್ಟರ ತನಕ ಅತ್ಯಂತ ಯಶಸ್ವಿ ಆಟಗಾರ. ಅವರು ಮೊದಲ ಪಂದ್ಯದಲ್ಲಿ ಆಕರ್ಷಕ 90 ರನ್ ದಾಖಲಿಸಿ ಆಸ್ಟ್ರೇಲಿಯಕ್ಕೆ ಕಠಿಣ ಸವಾಲು ವಿಧಿಸಲು ನೆರವಾಗಿದ್ದರು.
ಕೊಹ್ಲಿ ಮತ್ತು ಸುರೇಶ್ ರೈನಾ 3ನೆ ವಿಕೆಟ್‌ಗೆ 134 ರನ್‌ಗಳ ಜೊತೆಯಾಟ ನೀಡಿದ್ದರು. ಏಕದಿನ ಸರಣಿಯಲ್ಲಿ ಅವಕಾಶ ಪಡೆಯದ ರೈನಾ ಮೊದಲ ಟ್ವೆಂಟಿ-20 ಪಂದ್ಯ ಆಡಿ 41 ರನ್‌ಗಳ ಕಾಣಿಕೆ ನೀಡಿದ್ದಾರೆ. ಎರಡನೆ ಪಂದ್ಯಕ್ಕೆ ಅದೇ ತಂಡವನ್ನು ಉಳಿಸಿಕೊಳ್ಳುವ ಯೋಜನೆಯಲ್ಲಿದ್ದಾರೆ ನಾಯಕ ಧೋನಿ.
ಹಿರಿಯ ಆಟಗಾರ ಯುವರಾಜ್‌ಗೆ ಬ್ಯಾಟಿಂಗ್‌ಗೆ ಅವಕಾಶ ಸಿಕ್ಕಿರಲಿಲ್ಲ. ಸುಮಾರು 18 ತಿಂಗಳ ಬಳಿಕ ರಾಷ್ಟ್ರೀಯ ತಂಡದ ಪರ ಆಡುತ್ತಿರುವ ಯುವರಾಜ್ ಸಿಂಗ್ ಮುಂದಿನ ವಿಶ್ವಕಪ್ ತಂಡದಲ್ಲಿ ಅವಕಾಶ ಗಿಟ್ಟಸಿಕೊಳ್ಳುವ ಪ್ರಯತ್ನದಲ್ಲಿದ್ಧಾರೆ.
ಏಕದಿನ ಸರಣಿಯನ್ನು 1-4 ಅಂತರದಲ್ಲಿ ಗೆದ್ದುಕೊಂಡ ಆಸ್ಟ್ರೇಲಿಯ ತಂಡಕ್ಕೆ ಭಾರತ ಟ್ವೆಂಟಿ-20 ಸರಣಿಯ ಎರಡನೆ ಪಂದ್ಯದಲ್ಲೂ ಕಠಿಣ ಸವಾಲು ವಿಧಿಸುವುದನ್ನು ನಿರೀಕ್ಷಿಸಲಾಗಿದೆ.
ಶನಿವಾರ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ನ್ಯೂಝಿಲೆಂಡ್ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಎರಡನೆ ಪಂದ್ಯಕ್ಕೆ ಮಾತ್ರ ಲಭ್ಯರಿರುತ್ತಾರೆ.
ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯದ ಕಾರಣದಿಂದಾಗಿ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಎರಡನೆ ಪಂದ್ಯದಲ್ಲಿ ಆಡುವುದನ್ನು ನಿರೀಕ್ಷಿಸಲಾಗಿದೆ.
ಆಸ್ಟ್ರೇಲಿಯ : ಆ್ಯರೊನ್ ಫಿಂಚ್(ನಾಯಕ), ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಕ್ರಿಸ್ ಲಿನ್/ಟ್ರಾವಿಸ್ ಹೆಡ್, ಶೇನ್ ವ್ಯಾಟ್ಸನ್, ಜೇಮ್ಸ್ ಫಾಕ್ನರ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಜಾನ್ ಹೇಸ್ಟಿಂಗ್ಸ್, ನಥನ್ ಲಿನ್, ಕ್ಯಾಮರೊನ್ ಬೊಯ್ಸಾ, ಶಾನ್ ಟೇಟ್.
ಭಾರತ: ಮಹೇಂದ್ರ ಸಿಂಗ್ ಧೋನಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಸುರೇಶ್ ರೈನಾ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್ ಅಶ್ವಿನ್, ಹರ್ಭಜನ್ ಸಿಂಗ್, ಜಸ್ಪ್ರೀತ್ ಬುಮ್ರಾ, ಅಶೀಷ್ ನೆಹ್ರಾ.
ಪಂದ್ಯ ಸಮಯ: ಮಧ್ಯಾಹ್ನ 2:08 ಗಂಟೆಗೆ ಆರಂಭ.
,,,,,,,,
ಹೈಲೈಟ್ಸ್
*31ನೆ ಟ್ವೆಂಟಿ-20 ಪಂದ್ಯವನ್ನಾಡಿದ ಉಪನಾಯಕ ವಿರಾಟ ಕೊಹ್ಲಿ ಕಳೆದ ಪಂದ್ಯದಲ್ಲಿ ಔಟಾಗದೆ 90 ರನ್ ಗಳಿಸಿದ್ದರು. ಮೊದಲ ಶತಕ ದಾಖಲಿಸಲು ಅವರಿಗೆ ಸಾಧ್ಯವಾಗಲಿಲ್ಲ.
* ಕೊಹ್ಲಿ ಕಳೆದ ಪಂದ್ಯದಲ್ಲಿ 10ನೆ ಅರ್ಧಶತಕ ದಾಖಲಿಸಿದರು.
*ಕೊಹ್ಲಿ 10ಕ್ಕಿಂತ ಹೆಚ್ಚು ಅರ್ಧಶತಕ ದಾಖಲಿಸಿದ ವಿಶ್ವದ ನಾಲ್ಕನೆ ದಾಂಡಿಗ. ಬ್ರೆಂಡನ್ ಮೆಕಲಮ್, ಕ್ರಿಸ್ ಗೇಲ್, ತಿಲಕರತ್ನೆ ದಿಲ್ಶನ್ ಮತ್ತು ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ್ಧಾರೆ.
* ಆಸ್ಟ್ರೇಲಿಯಕ್ಕೆ ಒಮ್ಮೆ ಮಾತ್ರ ಟ್ವೆಂಟಿ-20 ಪಂದ್ಯದಲ್ಲಿ 160ಕ್ಕಿಂತ ಅಧಿಕ ರನ್‌ಗಳ ಸವಾಲನ್ನು ಬೆನ್ನಟ್ಟಲು ಸಾಧ್ಯವಾಗಿದೆ.
*ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬಹುಕಾಲದ ಬಳಿಕ ವಾಪಸಾಗಿರುವ ಟೇಟ್ ಬೌಲಿಂಗ್‌ನಲ್ಲಿ ಕೆಟ್ಟ ಪ್ರದರ್ಶನ ನೀಡಿದರು. ಅವರ ಪ್ರದರ್ಶನ 4-0-45-0
,,,,,







