ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ: ಸಿ.ವಸಂತ್

ಬಾಗೇಪಲ್ಲಿ, ಜ.28: ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಬೇಕಾದರೆ ದ್ವಿಚಕ್ರ ವಾಹನ ಸವಾರಿದಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದು ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ಸಿ.ವಸಂತ್ ಕರೆ ನೀಡಿದರು. ಇಂದು ಪಟ್ಟಣದ ಡಿವಿಜಿ ರಸ್ತೆಯಲ್ಲಿ ಪೊಲೀಸ್ ಇಲಾಖೆ ಮತ್ತು ನ್ಯಾಷನಲ್ ಕಾಲೇಜು ಇವುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಹೆಲ್ಮೆಟ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶದಂತೆ ದೇಶದ ಪ್ರತಿಯೊಬ್ಬ ದ್ವಿಚಕ್ರ ವಾಹನ ಚಾಲಕರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ಕಟ್ಟು ನಿಟ್ಟಿನ ಆದೇಶವಿರುವುದರಿಂದ ಪಾಲನೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಹೆಲ್ಮೆಟ್ ಧರಿಸದಿರುವುದರಿಂದಲೇ ದೇಶದಲ್ಲಿ ಹೆಚ್ಚಿನ ಅಪಘಾತಗಳಲ್ಲಿ ಅನೇಕ ಸಾವು ಪ್ರಕರಣಗಳು ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಸವಾರರು ತಮ್ಮ ಅಮೂಲ್ಯವಾದ ಪ್ರಾಣವನ್ನು ರಕ್ಷಿಸಿಕೊಳ್ಳಬೇಕಾದರೆ ಹೆಲ್ಮೆಟ್ ಹಾಕಿಕೊಳ್ಳಬೇಕೆಂದು ಸವಾರಿದಾರರಿಗೆ ತಾಕೀತು ಮಾಡಿದ ಅವರು, ಇದರಿಂದ ಸರಕಾರಕ್ಕಾಗಲಿ ಅಥವಾ ಇಲಾಖೆಗಾಗಲಿ ಯಾವುದೇ ಲಾಭವಿಲ್ಲ ಇದರಿಂದ ಮುಗ್ದ ಪ್ರಾಣಗಳು ಉಳಿಯಲಿ ಎಂದು ನ್ಯಾಯಾಲಯ ಈ ಆದೇಶವನ್ನು ಜಾರಿಗೆ ತಂದಿರುವುದಾಗಿ ತಿಳಿಸಿದರು.ರಕ್ಷಕ ಉಪ ನಿರೀಕ್ಷಕ ಭೈರಾ ಮಾತನಾಡಿ, ಈಗಾಗಲೇ ಹೆಲ್ಮೆಟ್ ಬಗ್ಗೆ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದ್ದು, ಯಾವುದೇ ದ್ವಿಚಕ್ರ ಸವಾರರು ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸಲೇಬೇಕು. ಒಂದು ವೇಳೆ ಧರಿಸದಿದ್ದಲ್ಲಿ ಮೊದಲ ಬಾರಿ 100 ರೂ. ಎರಡನೆ ಬಾರಿ 200 ರೂ .ದಂಡ ಮೂರನೆ ಬಾರಿ 300 ರೂ. ದಂಡ ವಿಧಿಸಲಾಗುವುದು. ಬಳಿಕವೂ ತಪ್ಪನ್ನು ಪುನರಾವರ್ತಿಸಿದರೆ ಸವಾರರ ವಿರುದ್ಧ ಪ್ರಕರಣವನ್ನು ದಾಖಲು ಮಾಡಿ ವಾಹನವನ್ನು ಹಿಡಿದು ನ್ಯಾಯಲಯದ ವಶಕ್ಕೆ ಒಪ್ಪಿಸಿಲಾಗುವುದು ಎಂದು ಎಚ್ಚರಿಕೆಯ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ನ್ಯಾಷನಲ್ ಕಾಲೇಜಿನ ದೈಹಿಕ ಶಿಕ್ಷಣಾಧಿಕಾರಿ ಸಿ.ಆರ್.ಪ್ರಕಾಶ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







