‘ಅಧಿಕಾರಿಗಳ ನಿರ್ಲಕ್ಷದಿಂದ ಅನಿಷ್ಟಪದ್ಧತಿಗಳು ಜೀವಂತ’
ಬಾಗೇಪಲ್ಲಿ: ಜೀತದಾಳುಗಳ ದಿನಾಚರಣೆ
ಬಾಗೇಪಲ್ಲಿ, ಜ.28: ದೇಶಕ್ಕೆ ಸಂವಿಧಾನ ಜಾರಿಗೆ ಬಂದು 67 ವರ್ಷಗಳು ಕಳೆದರೂ ಸಹ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ಕನಸಾಗಿಯೇ ಉಳಿದಿದೆ ಎಂದು ಜೀವಿಕ ಸಂಘಟನೆಯ ಜಿಲ್ಲಾ ಸಂಚಾಲಕ ಬೀಚಗಾನಹಳ್ಳಿ ನಾರಾಯಣಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ತಾಲೂಕು ಜೀವಿಕ ಕಚೇರಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಜೀತದಾಳು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು , ಸಂವಿಧಾನದ ಮೂಲ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಸೋದರತ್ವ ಹಾಗೂ ಇನ್ನು ಅನೇಕ ಮೂಲಭೂತ ಆಶಯಗಳು ಇಂದಿಗೂ ಸಹ ಗ್ರಾಮೀಣ ಭಾಗದಲ್ಲಿ ತಳಸಮುದಾಯಗಳಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅನುಷ್ಠಾನಗೊಳಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದಲ್ಲಿ ಜಾತಿ ಪದ್ದತಿ, ಜೀತಪದ್ಧ್ದತಿ, ದೇವದಾಸಿ, ಬಿಟ್ಟಿಚಾಕರಿ ಸೇರಿದಂತೆ ಅನಿಷ್ಟ ಪದ್ಧ್ದತಿಗಳು ಇಂದಿಗೂ ಜೀವಂತವಾಗಿವೆ. ಆದರೆ ಇಂತಹ ಪದ್ಧ್ದತಿಗಳನ್ನು ನಿರ್ಮೂಲನೆ ಮಾಡಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುವ ಮೂಲಕ ನಿರ್ಲಕ್ಷ್ಯ ಮನೋಭಾವನೆ ತೋರುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ದ ಕಿಡಿಕಾರಿದರು.
ತಾಲೂಕು ಸಂಚಾಲಕ ನಾರಾಯಣ ಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಸುಮಾರು 20 ವರ್ಷಗಳಿಂದ ಜೀವಿಕ ಸಂಘಟನೆ ಗ್ರಾಮೀಣ ಭಾಗದಲ್ಲಿ ಜೀತ ಸಮಸ್ಯೆ ಬಗ್ಗೆ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದು, ಇದುವರೆಗೂ ಒಟ್ಟು 626 ಜೀತವಿಮುಕ್ತರಿಗೆ ಬಿಡುಗಡೆ ಪ್ರಮಾಣ ಪತ್ರ ಸಿಕ್ಕಿದೆ. ಆದರೆ ಈ ಭಾಗದ ಮೂಲಭೂತ ಸೌಲಭ್ಯಗ ಳಿಂದ ವಂಚಿತರಾಗಿರುವ ಜೀತ ವಿಮುಕ್ತರಿಗೆ ಸರಕಾರ ಕೂಡಲೇ ಸೂಕ್ತ ಸೌಕರ್ಯ ಗಳನ್ನು ಕಲ್ಪಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗುಡಿಬಂಡೆ ತಾಲೂಕು ಸಂಚಾಲಕ ಚನ್ನರಾಯಪ್ಪ, ತಾಲೂಕು ಮಹಿಳಾ ಸಂಚಾಲಕಿ ಎನ್.ಲಕ್ಷ್ಮೀ, ಹೋಬಳಿ ಸಂಚಾಲಕರಾದ ನಾರಾಯಣಸ್ವಾಮಿ, ಆದಿನಾರಾ ಯಣಪ್ಪ, ಶಿವಣ್ಣ, ಬಾಬು, ಒಕ್ಕೂಟದ ಪದಾಧಿಕಾರಿಗಳಾದ ಶಾಂತಮ್ಮ, ಅಂಜಿನಪ್ಪ, ಶ್ರೀನಿವಾಸ್ ಮುತ್ತಿತರು ಉಪಸ್ಥಿತರಿದ್ದರು.





