ಮಂಗಳೂರು : ಜಿಲ್ಲೆಯಲ್ಲಿ ಲಿಂಗಾನುಪಾತ 1 ಸಾವಿರ ಪುರುಷರಿಗೆ 1019 ಮಹಿಳೆಯರು

ಮಂಗಳೂರು ಜನವರಿ 28 : ದ.ಕ ಜಿಲ್ಲೆಯಲ್ಲಿ 2011 ರ ಜನಗಣತಿಯಂತೆ ಒಂದು ಸಾವಿರ ಪುರುಷರಿಗೆ 1019 ಮಹಿಳೆಯರು ಇದ್ದಾರೆ, 0-6 ರ ವಯೋಮಾನದ ಶಿಶುಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಸಾವಿರ ಮಕ್ಕಳಿಗೆ 946 ಹೆಣ್ಣು ಮಕ್ಕಳಿದ್ದಾರೆ. 2015ನೇ ಸಾಲಿನಲ್ಲಿ ಸರಕಾರಿ ಲೇಡಿಗೊಷನ್ ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳಲ್ಲಿ 1000 ಮಕ್ಕಳಿಗೆ 526 ಗಂಡು ಹಾಗೂ 474 ಹೆಣ್ಣು ಶಿಶುಗಳು ಜನಿಸುವ ಮೂಲಕ ಶಿಶುಗಳ ಜನನದಲ್ಲಿಯೇ ಹೆಣ್ಣುಮಕ್ಕಳ ಲಿಂಗಾನುಪಾತ ಆತಂಕಕ್ಕಿಡಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ: ರಾಮಕೃಷ್ಣ ರಾವ್ ತಿಳಿಸಿದರು.
ಅವರು ಇಂದು ತಮ್ಮ ಕಛೇರಿಯಲ್ಲಿ ಜರುಗಿದ ಜನನ ಪೂರ್ವ ಲಿಂಗ ನಿರ್ಣಯ (ನಿರ್ಬಂಧ ಮತ್ತು ದುರ್ಬಳಕೆ) ತಡೆ ಕಾಯಿದೆ 1994 ರ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಗಳೂರು ನಗರದ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಲ್ಲಿ ಅಂದರೆ 2005-15 ರವರೆಗೆ ಒಟ್ಟು 60,667 ಹೆರಿಗೆಗಳಾಗಿದ್ದು ಇದರಲ್ಲಿ 31,121 ಗಂಡು ಮತ್ತು 29,546 ಹೆಣ್ಣು ಶಿಶುಗಳು ಜನಿಸಿದ್ದಾರೆ ಎಂದು ಆಸ್ಪತ್ರೆಯ ಅಧೀಕ್ಷಕಿ ಡಾ: ಸವಿತಾ ಸಭೆಗೆ ಅಂಕಿ ಅಂಶ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 145 ಸ್ಕ್ಯಾನಿಂಗ್ ಸೆಂಟರ್‌ಗಳಿದ್ದು 252 ಸ್ಕ್ಯಾನಿಂಗ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಜಿಲ್ಲಾ ಸಲಹಾ ಸಮಿತಿಯ ಸದಸ್ಯರುಗಳು ಧಿಡೀರ್ ಭೇಟಿ ನೀಡುವ ಮೂಲಕ ಪತ್ತೆ ಹಚ್ಚಲು ಸಭೆಯಲ್ಲಿ ಕಾರ್ಯ ಸೂಚಿಯನ್ನು ಮಂಡಿಸಲಾಯಿತು.
ಸಭೆಯಲ್ಲಿ ಡಾ. ಇ.ವಿ ಶೆಣೈ, ಡಾ. ಹಿಲ್ಡಾ ರಾಯಪ್ಪನ್, ಡಾ.ರಶ್ಮಿ ಮುಂತಾದವರು ಹಾಜರಿದ್ದರು.







